ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ರಶ್ಯ ವಜಾಕ್ಕೆ ಉಕ್ರೇನ್ ಆಗ್ರಹ

ಕೀವ್, ಡಿ.26: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವದಿಂದ ರಶ್ಯವನ್ನು ವಜಾಗೊಳಿಸಬೇಕೆಂಬ ಬೇಡಿಕೆ ಮಂಡಿಸುವುದಾಗಿ ಉಕ್ರೇನ್ ನ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ(Dmytro Kuleba) ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ನಿಲುವನ್ನು ಅಧಿಕೃತವಾಗಿ ವ್ಯಕ್ತಪಡಿಸಲಿದ್ದೇವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿ ಉಳಿಯಲು, ಅಷ್ಟೇ ಅಲ್ಲ ವಿಶ್ವಸಂಸ್ಥೆಯಲ್ಲಿ ಇರಲು ರಶ್ಯಕ್ಕೆ ಹಕ್ಕು ಇದೆಯೇ? ಎಂಬ ಸರಳ ಪ್ರಶ್ನೆ ನಮ್ಮದು. ಇದಕ್ಕೆ ನಮ್ಮ ತರ್ಕಬದ್ಧ ಉತ್ತರ ‘ಇಲ್ಲ, ಅದಕ್ಕೆ ಆ ಹಕ್ಕು ಇಲ್ಲ’ ಎಂಬುದಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾದ ಜತೆ ರಶ್ಯಾವೂ ಹೊಂದಿರುವ ವೀಟೊ ಅಧಿಕಾರದ ಬಗ್ಗೆ ರಾಜತಾಂತ್ರಿಕ ವಲಯದಲ್ಲಿ ಚರ್ಚೆಯಾಗಿದೆ ಎಂದವರು ಹೇಳಿದ್ದಾರೆ.
15 ಸದಸ್ಯಬಲದ ಭದ್ರತಾ ಮಂಡಳಿಯು ನಿರ್ಬಂಧ ಜಾರಿಗೊಳಿಸುವ ಮೂಲಕ ಜಾಗತಿಕ ಬಿಕ್ಕಟ್ಟು ನಿಭಾಯಿಸುವ, ಮಿಲಿಟರಿ ಕಾರ್ಯಾಚರಣೆಗಳನ್ನು ಅಧಿಕೃತಗೊಳಿಸುವ, ವಿಶ್ವಸಂಸ್ಥೆ ಸನ್ನದಿನಲ್ಲಿ ಬದಲಾವಣೆಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದೆ. ಆದರೆ ಐದು ಕಾಯಂ ಸದಸ್ಯ ದೇಶಗಳು ವೀಟೊ ಅಧಿಕಾರ ಹೊಂದಿದ್ದು ಯಾವುದೇ ನಿರ್ಣಯಕ್ಕೆ ತಡೆ ನೀಡಬಹುದಾಗಿದೆ. ಭದ್ರತಾ ಮಂಡಳಿಯ ಸುಧಾರಣೆಗೆ ಹಲವು ದೇಶಗಳು ಆಗ್ರಹಿಸುತ್ತಿದ್ದು ಆಫ್ರಿಕಾ ಮತ್ತು ಲ್ಯಾಟಿಕನ್ ಅಮೆರಿಕಾ ದೇಶಗಳಿಗೂ ಕಾಯಂ ಸದಸ್ಯನಾಗಲು ಅವಕಾಶ ಒದಗಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ವಿಶ್ವಸಂಸ್ಥೆಯ ವಿಸ್ತರಣೆಗೆ ತನ್ನ ಬೆಂಬಲವಿದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್( Biden) ಹೇಳಿದ್ದಾರೆ.