ಕೋವಿಡ್ ಅಲೆಗೆ ಚೀನಾ ಹೈರಾಣು: ಜೀವರಕ್ಷಕ ಕ್ರಮ ಕೈಗೊಳ್ಳುವಂತೆ ಜಿಂಪಿಂಗ್ ಸೂಚನೆ

ಬೀಜಿಂಗ್, ಡಿ.26: ಚೀನಾದಲ್ಲಿ ನಿಯಂತ್ರಣ ತಪ್ಪಿರುವ ಕೋವಿಡ್ ಸೋಂಕಿನ ಪ್ರಕರಣವನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿರುವಂತೆಯೇ, ಜೀವಗಳನ್ನು ರಕ್ಷಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಠಿಣ ನಿರ್ಬಂಧ ಕ್ರಮಗಳನ್ನು ಇತ್ತೀಚೆಗೆ ಏಕಾಏಕಿ ಕೈಬಿಟ್ಟ ಬಳಿಕ ಚೀನಾದಲ್ಲಿ ಕೋವಿಡ್ ಸೋಂಕು ಉಲ್ಬಣಿಸಿದ್ದು ದಾಖಲೆ ಮಟ್ಟದಲ್ಲಿ ದೈನಂದಿನ ಸೋಂಕು ವರದಿಯಾಗುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ ಸುಮಾರು 1 ದಶಲಕ್ಷ ಮಂದಿ ಸಾಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಮಧ್ಯೆ, ಅಧಿಕಾರಿಗಳ ಸಭೆ ನಡೆಸಿದ ಅಧ್ಯಕ್ಷ ಕ್ಸಿಜಿಂಪಿಂಗ್ ‘ಪ್ರಸ್ತುತ ಚೀನಾದಲ್ಲಿ ಕೋವಿಡ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣವು ಹೊಸ ಸವಾಲನ್ನು ಮುಂದಿರಿಸಿದೆ. ನಾವು ದೇಶಭಕ್ತಿಯ ಆರೋಗ್ಯ ಅಭಿಯಾನವನ್ನು ಹೆಚ್ಚು ಉದ್ದೇಶಿತ ರೀತಿಯಲ್ಲಿ ಪ್ರಾರಂಭಿಸಬೇಕು. ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಮುದಾಯದ ರಕ್ಷಣಾ ಮಾರ್ಗಗಳನ್ನು ಬಲಪಡಿಸಬೇಕು ಮತ್ತು ಜನರ ಜೀವನ, ಸುರಕ್ಷತೆ ಹಾಗೂ ಆರೋಗ್ಯವನ್ನು ಪರಿಣಾಮಕಾರಿ ರೀತಿಯಲ್ಲಿ ರಕ್ಷಿಸಬೇಕು’ ಎಂದು ಸೂಚನೆ ನೀಡಿರುವುದಾಗಿ ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.