ಬೈಲು ಮೂಡುಕರೆ ಕುಟುಂಬದ 300 ವರ್ಷ ಹಿಂದಿನ ಪಾರಂಪರಿಕ ಗುತ್ತು ಮನೆಯ ನವೀಕರಣ;ಸಾಧಕರಿಗೆ ಸನ್ಮಾನ
ಸುರತ್ಕಲ್: ಜನವರಿ 8 ರಂದು 300 ವರ್ಷಗಳ ಇತಿಹಾಸವಿರುವ ಬೈಲುಮೂಡುಕರೆ ಅವಿಭಕ್ತ ಕುಟುಂಬದ ಪರಂಪರೆಯನ್ನು ಉಳಿಸಿ ಕೊಂಡಿರುವ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ನವೀಕೃತ ಮನೆಯ ಗೃಹಪ್ರವೇಶ ಅದೇ ದಿನ ಬೆಳಗ್ಗೆ ಗಂಟೆ 11.30ಕ್ಕೆ ಬೈಲುಮೂಡುಕರೆ ದಿ ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಬೈಲುಮೂಡುಕರೆ ಮನೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಬೈಲುಮೂಡುಕರೆ ಮನೆತನದ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಶೆಡ್ಯೆ ಮಂಜುನಾಥ ಭಂಡಾರಿ ಬೈಲು ಮೂಡುಕರೆ ಅವರು ಸುದ್ದಿಗೋಷ್ಠಿಯ ಲ್ಲಿಂದು ಮಾಹಿತಿ ನೀಡಿದ್ದಾರೆ.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಡಾ| ಎಂ. ಮೋಹನ್ ಆಳ್ವ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ದೇವಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪಾಲ್ಗೊಳ್ಳ ಲಿದ್ದಾರೆ ಎಂದು ಅವರು ಮಾಹಿತಿನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೈಲು ಮೂಡುಕರೆ ಮನೆತನದ ಹರೀಶ್ ಶೆಟ್ಟಿ, ದೇವದಾಸ ನಾಯ್ಕ್,ಸತೀಶ್ ಆಳ್ವ, ಭುಜಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು ಎಂದು ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಬೈಲು ಮೂಡುಕರೆ ಕುಟುಂಬದ 300ವರ್ಷಗಳ ಹಿಂದಿನ ಅಪರೂಪದ ಮನೆ:
ಬೈಲು ಮೂಡುಕೆರೆ ಮನೆಯ ಇತಿಹಾಸವು ಸಾಧಾರಣ 300 ವರ್ಷಗಳಿಗೆ ಮೇಲ್ಪಟ್ಟದ್ದಾಗಿದ್ದು, ಪ್ರಸ್ತುತ ಈಗ ಇರುವಂತಹ ಈ ಮನೆಯನ್ನು 17ನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಿದ್ದಾಗಿ ತಿಳಿದುಬರುತ್ತದೆ. ಪ್ರಕೃತ ಭೂಮಿಯ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತು ಕುಟುಂಬದ ಸಂತತಿ ನಕ್ಷೆಯನ್ನು ಗಮನಿಸಿದಾಗ, ಅಳಿಯ ಸಂತಾನ ಪದ್ಧತಿಯನ್ನು ಆಚರಿಸಿಕೊಂಡು ಬಂದ ಈ ಕುಟುಂಬದ ಹಿರಿಯ ವ್ಯಕ್ತಿ ತೌಡ ಶೆಟ್ಟಿ ಯಾನೆ ಕಾಂತಪ್ಪ ಶೆಟ್ಟಿ ಎಂದು ಇದ್ದು, ಇವರ ಸಹೋದರಿ ಲಕ್ಷ್ಮಿ ಸಂತಾನದವರಿಂದ ಈ ಕುಟುಂಬವು ಮುಂದುವರಿದಂತಿದೆ.
ಬೈಲು ಮೂಡುಕರೆ ಕುಟುಂಬವು ಬಂಟ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಪಡೆದಿರುತ್ತದೆ. ಈ ಕುಟುಂಬದವರು ಸತ್ಯಸಂಧರು, ಧರ್ಮಿಷ್ಠರು, ಬಹುಮಿತ್ರರು, ಸಾಹಸಿಗರು, ದಾನಿಗಳು, ಶ್ರಮ ಜೀವಿಗಳಾಗಿದ್ದು, ಸಮಾಜ ನಿರ್ಮಾಣದಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಲ್ಲದೆ ದೈವ ಭಕ್ತಿವುಳ್ಳವರಾಗಿದ್ದು, ತಮ್ಮದೆ ಸ್ವಂತ ನೆಲೆಯಲ್ಲಿ ದೇವಸ್ಥಾನ, ದೈವಸ್ಥಾನ, ದೈವದ ಚಾವಡಿಗಳು, ನಾಗಾಲಯ ಇತ್ಯಾದಿಗಳನ್ನು ನಿರ್ಮಿಸಿಕೊಂಡು ಊರವರನ್ನು ಸೇರಿಸಿಕೊಂಡು ಆರಾಧಿಸುತ್ತಿದ್ದಾರೆ. ನಮ್ಮ ಗಡಿನಾಡು ಕೇರಳದಿಂದ ಹಿಡಿದು ಉತ್ತರ ಬೊಂಬಾಯಿ ತನಕ ನಡೆಯುವ ದೇವತಾ ಉತ್ಸವಗಳಲ್ಲಿ ಈ ಮನೆಯವರ ಪಾತ್ರ ಇದೆ.
ಬಂಟ ಸಮಾಜದ ಪ್ರತಿಷ್ಠಿತ ಮನೆತನಗಳಾಗಿದ್ದ ಕೊಡಿಯಾಲ್ ಗುತ್ತು, ಜಪ್ಪು ಗುಡ್ಡೆ ಗುತ್ತು, ಪುತ್ತಿಗೆ ಗುತ್ತು, ಮುಂಡುದೆಗುತ್ತು, ಕೂರಿಯಾಳ, ಕುಳ, ಬೆಳ್ಳಿಪಾಡಿ, ಹಂದಾಡಿ ತೆಂಕುಮನೆ, ಅಮುಣಿಂಜೆ ಗುತ್ತು, ಭಾರಿಂಜೆ, ಮೂಡುಕರೆ ಗುತ್ತು, ಸೊಂತಾಡಿ ಮನೆತನ, ಕಂದಾವರ ಬಾಳಿಕೆಗಳೊಂದಿಗೆ ನೆಂಟಸ್ತಿಕೆಯನ್ನು ಹೆಣೆದುಕೊಂಡು ವಂಶವನ್ನು ಬೆಳೆಸಿಕೊಂಡರು. ಇದರಲ್ಲಿ ಮುಖ್ಯವಾಗಿ ಬೈಲು ಮಾಗಣೆಯಲ್ಲಿ ಹೆಸರು ಪಡೆದಿರುವ ಬೈಲ ಬಂಗೇರಣ್ಣ ಕುಲದ ಮನೆಗಳಾದ ಬೈಲು ಮೇಗಿನ ಮನೆ, ಹೊಸ ಮನೆಗಳಿಗೆ ಅಂದಿನಿಂದ ಇಂದಿನವರೆಗೂ ತಲೆತಲಾಂತರ ಎಂಬಂತೆ ಸಂಬಂಧವನ್ನು ಬೆಳೆಸಿಕೊಂಡು ಕರಾವಳಿಯ ಏಳು ಗ್ರಾಮಗಳಲ್ಲಿ ಸಂಪತ್ತನ್ನು ವೃದ್ಧಿಸಿ ಅಲ್ಲಲ್ಲಿ ನೆಲೆಗಳನ್ನು ಸ್ಥಾಪಿಸಿಕೊಂಡರು.
ಪ್ರಕೃತ ಈ ಕುಟುಂಬವು ಅನೇಕ ಊರುಗಳಲ್ಲಿ ನೆಲೆಗಳನ್ನು ಮಾಡಿಕೊಂಡಿದ್ದರೂ, ಮಂಗಳೂರು ಸೀಮೆಯ ಕಾವೂರು ಮತ್ತು ಬೈಲು ಮಾಗಣೆಯ ಮೂಡುಕರೆಯಲ್ಲಿ ತಮ್ಮ ಮೂಲಸ್ಥಾನಗಳನ್ನು ಹೊಂದಿದೆ. ಈ ಮನೆಯು ಸಾಧಾರಣ 300 ವರ್ಷಗಳ ಕುರುಹುಗಳನ್ನು ಕೊಡುತ್ತಿದೆ. ಪ್ರಾರಂಭದಲ್ಲಿ ಹುಲ್ಲಿನ ಛಾವಣಿಯಾಗಿದ್ದ ಈ ಮನೆಗೆ ನಂತರದ ದಿನಗಳಲ್ಲಿ (ತಿಪ್ಪಿ ಓಡು' )ಎಂಬ ಕುಂಬಾರರಿಂದ ನಿರ್ಮಿಸಿದ ಹಂಚನ್ನು ಹಾಕಲಾಗಿತ್ತು. 19 ನೇ ಶತಮಾನದಲ್ಲಿ ಬಾಸೆಲ್ ಮಿಶನರಿಗಳಿಂದ ನಿರ್ಮಿಸಲ್ಪಟ್ಟ ಮಂಗಳೂರು ಹಂಚಿನಮನೆಯಾಗಿ ಪರಿವರ್ತನೆಗೊಂಡಿತು.ಈ ಮನೆಯ ವಿಶೇಷವೆಂದರೆ ಮೂಲದಲ್ಲಿ ಹಿರಿಯರು ಹಾಕಿದ ಕೆಸರು ಕಲ್ಲನ್ನು ಮತ್ತು ಪಂಚಾಂಗ ವನ್ನು ವಿಕೃತಗೊಳಿಸದೆ ಕಲ್ಲಿನ ಕಂಬ, ಮಣ್ಣಿನ ಗೋಡೆ, ಕೆಲವು ಕಡೆ ಕಲ್ಲಿನ ಗೋಡೆಯಿಂದ ಅಗತ್ಯಕ್ಕೆ ತಕ್ಕಂತೆ ವಾಸ್ತುಶಾಸ್ತ್ರಕ್ಕೆ ಕುಂದು ಬಾರದಂತೆ ನಾಲ್ಕು ಸುತ್ತಲೂ ಪಾಗಾರ, ಹಟ್ಟಿ-ಕೊಟ್ಟಿಗೆ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ.
ಊರಿನ ಜಾತ್ರೆ ಬೈಲಬಂಡಿಗೆ ತುಂಬಾ ಮಂದಿ ನೆಂಟರು, ಮತ್ತು ಬೈಲು ಬಂಡಿ ಆಗುವಲ್ಲಿ ಹೊಟೇಲ್ ಇಲ್ಲದ ಕಾರಣ ದೊಂದಿ ಮತ್ತು ದೀವಟಿಕೆ ಹಿಡಿಯುವ ಜನರು, ಕರ್ಮಿಗಳು ಮತ್ತು ಮೋಗವೀರ ಸಮಾಜದ ಬಂಧುಗಳ ಕಡಿಮೆ ಎಂದರೆ 80 ರಿಂದ 100 ಮಂದಿ ಊಟಕ್ಕೆ ಈ ಮನೆಗೇ ಬರುತ್ತಿದ್ದರು. ಅದ್ಯಪಾಡಿಯಲ್ಲಿರುವ ಬಂಟಸ್ಥಾನವು ಈ ಕುಟುಂಬದ ಅಧೀನದಲ್ಲಿದೆ. ಇದಕ್ಕಿಂತಲೂ ಹಿಂದೆ ಕಾವೂರಿನ ಬಂಟನ ಸ್ಥಾನ ಮತ್ತು ಚಾವಡಿ ಈ ಕುಟುಂಬದವರಿಗಿದ್ದು, ಅಲ್ಲಿ 2ನೇ ಸ್ಥಾನದ ಮರ್ಯಾದೆ ಈ ಕುಟುಂಬಕ್ಕಿದೆ. ಬೈಲು ಮಾಗಣೆಯಲ್ಲಿ ಕೊಳಂಬೆ ಗ್ರಾಮದಲ್ಲಿರುವ ಕೌಡೂರು ಎಂಬಲ್ಲಿಂದ ಕೊಡಮಣಿತ್ತಾಯ ದೈವದ ಭಂಡಾರವೂ ಈಕುಟುಂಬಿಕರ ಹೊಣೆಯಲ್ಲಿದ್ದು, ಅಲ್ಲಿಯೂ ಆಸ್ತಿಯನ್ನು ಹೊಂದಿರುತ್ತಾರೆ.