ನಿರ್ದಿಷ್ಟ ಇತಿಹಾಸಕಾರರ ಗುಂಪಿನಿಂದ ಭಾರತದಲ್ಲಿ ವಿರೂಪಗೊಳಿಸಿದ ಇತಿಹಾಸ ಬೋಧನೆ: ಕೇಂದ್ರ ಸಚಿವ ಆರೋಪ
ಸಸರಾಂ (ಬಿಹಾರ): ನಿರ್ದಿಷ್ಟ ಇತಿಹಾಸಕಾರರ ಗುಂಪಿನಿಂದ ಭಾರತದಲ್ಲಿ ವಿರೂಪಗೊಳಿಸಿದ ಇತಿಹಾಸದ ಬೋಧನೆಯಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಮಹೇಂದ್ರ ನಾಥ್ ಪಾಂಡೆ, ಭಾರತೀಯರ ಇತಿಹಾಸಕ್ಕೆ ಮರುಭೇಟಿ ನೀಡಬೇಕಾದ ಅಗತ್ಯವಿದೆ ಮತ್ತು ಇಂತಹ ವಿರೂಪಗಳನ್ನು ತಿದ್ದುವ ಪ್ರಯತ್ನಗಳು ನಡೆಯಬೇಕಿವೆ ಎಂದು ಪ್ರತಿಪಾದಿಸಿದ್ದಾರೆ.
ಬಿಹಾರದ ಸಸರಾಂ ಜಿಲ್ಲೆಯ ಜಮುಹಾರ್‌ನ ಗೋಪಾಲ್ ನಾರಾಯಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಹಾಗೂ ಭಾರತೀಯ ಇತಿಹಾಸ ಸಂಕಲನ ಯೋಜನೆ ಜಂಟಿಯಾಗಿ ಆಯೋಜಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹುತೇಕ ಇತಿಹಾಸಕಾರರು ಭಾರತ ಅಥವಾ ಭಾರತದ ಸಂಸ್ಕೃತಿ ಮತ್ತು ನಾಗರಿಕತೆಗೆ ನ್ಯಾಯ ಒದಗಿಸಿಲ್ಲ. ನಿರ್ದಿಷ್ಟ ಇತಿಹಾಸಕಾರರ ಗುಂಪು ವಿರೂಪಗೊಳಿಸಿದ ಇತಿಹಾಸವನ್ನು ಬೋಧಿಸುತ್ತಿದೆ. ಈಗ ಈ ಕುರಿತು ಚಿಂತನೆ ನಡೆಸಬೇಕಾದ ಸಮಯವಾಗಿದ್ದು, ಸರಿಪಡಿಸುವ ಕ್ರಮವನ್ನು ಜಾರಿಗೊಳಿಸಿ, ಈ ತಪ್ಪುಗಳನ್ನು ತಿದ್ದಬೇಕಿದೆ ಮತ್ತು ಅಂತಿಮವಾಗಿ ಪ್ರಾಚೀನ ಭಾರತೀಯ ಇತಿಹಾಸವನ್ನು ವಿಜೃಂಭಿಸಬೇಕಿದೆ. ನಿರ್ದಿಷ್ಟ ಸೈದ್ಧಾಂತಿಕತೆಗೆ ಸೇರಿರುವ ನಿರ್ದಿಷ್ಟ ಇತಿಹಾಸಕಾರರ ಗುಂಪಿನಿಂದ ಮಂಡನೆಯಾಗಿರುವ ವಿರೂಪಗೊಳಿಸಿದ ಭಾರತೀಯ ಇತಿಹಾಸ ದೃಷ್ಟಿಕೋನವನ್ನು ನಾವು ಸರಿಪಡಿಸಲೇಬೇಕಿದೆ ಎಂದು ಹೇಳಿದ್ದಾರೆ.
ಕೆಲವು ಮೂಲಭೂತ ತಿದ್ದುಪಡಿಗಾಗಿ ಭಾರತೀಯ ಇತಿಹಾಸಕ್ಕೆ ಮರುಭೇಟಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿರುವ ಸಚಿವರು, ವಾಸ್ತವವೆಂದರೆ ಭಾರತೀಯ ನಾಗರಿಕತೆ ಅತ್ಯಂತ ಪ್ರಾಚೀನವಾಗಿದೆ. ಈ ನಾಗರಿಕತೆಯ ಜನರು ಜ್ಞಾನ ಮತ್ತು ಆಡಳಿತದ ವಿಷಯದಲ್ಲಿ ವಿಶ್ವದ ಬಹುತೇಕ ದೇಶಗಳಿಗಿಂತ ಮುಂದಿದ್ದರು. ದೇಶಕ್ಕೆ ತನ್ನ ದಾಖಲೆಯನ್ನು ನೇರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಇತಿಹಾಸವು ವಿಷಯಾಧಾರಿತವಾಗಿ ದಾಖಲಾಗಬೇಕಿದೆ. ಹೀಗಾಗಿ ಇತಿಹಾಸವನ್ನು ಸರಿಪಡಿಸಿದ ಆವೃತ್ತಿಯಲ್ಲಿ ಹೊರತರುವ ಜವಾಬ್ದಾರಿಯನ್ನು ಭಾರತೀಯ ಪ್ರಾಚೀನ ಇತಿಹಾಸ ಯೋಜನೆ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸುರೇಶ್ ಸೋನಿ, ಭಾರತದ ಸಂಪದ್ಭರಿತ ಇತಿಹಾಸವನ್ನು ಸರಿಯಾದ ಕ್ರಮದಲ್ಲಿ ವಿಜೃಂಭಿಸಲು ಇದು ಸಕಾಲವಾಗಿದೆ. ಈ ಪ್ರಕ್ರಿಯೆ ಇದೀಗ ಆರಂಭಗೊಂಡಿದ್ದು, ಅಗತ್ಯವಿರುವ ಎಲ್ಲ ತಿದ್ದುಪಡಿಯನ್ನು ಭಾರತದ ಇತಿಹಾಸದಲ್ಲಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.