ಆಟೋ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶ ಜಾರಿಗೆ ಆಗ್ರಹ
ಮಂಗಳೂರು: ನಗರ ಮತ್ತು ಗ್ರಾಮಾಂತರ ಪ್ರದೇಶದ ಆಟೊ ರಿಕ್ಷಾಗಳ ಕಲರ್ ಕೋಡಿಂಗ್ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು. ಮಂಗಳೂರು ಮಹಾನಗರ ಪಾಲಿಕೆಯು ರಿಕ್ಷಾ ಪಾರ್ಕ್ ಗಳ ನೋಂದಣಿಯಲ್ಲಿ ವಿಳಂಬ ಮಾಡಬಾರದು. ನಗರದೊಳಗೆ ಗ್ರಾಮಾಂತರ ರಿಕ್ಷಾಗಳು ಅಕ್ರಮವಾಗಿ ಸಂಚರಿಸಿ ಬಾಡಿಗೆ ಪಡೆಯುವುದನ್ನು ನಿಲ್ಲಿಸಬೇಕು ಎಂದು ದ.ಕ.ಜಿಲ್ಲಾ ಆಟೊ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ವಿಷ್ಣುಮೂರ್ತಿ ಭಟ್, ರಿಕ್ಷಾ ಮೀಟರ್ ದರ ಪರಿಷ್ಕರಿಸಿ ಕಿ.ಮೀ.ಗೆ ಕನಿಷ್ಠ 35 ರೂ. ಜಾರಿಗೊಳಿಸಲಾಗಿದೆ. ನಗರ ರಿಕ್ಷಾಗಳಿಗೆ ವಲಯ 1 ನೀಲಿ ಬಣ್ಣದ ಚೌಕಾಕೃತದಲ್ಲಿ ಹಾಗೂ ಗ್ರಾಮಾಂತರ ಭಾಗದ ರಿಕ್ಷಾಗಳಿಗೆ ವಲಯ 2 ಹಳದಿ ಬಣ್ಣದ ವೃತ್ತಾಕಾರದಲ್ಲಿ ವಲಯ ಕ್ರಮ ಸಂಖ್ಯೆ ಹಾಕುವುದು ಕಡ್ಡಾಯವಾಗಿದೆ. ಈ ಆದೇಶವನ್ನು ಶೀಘ್ರದಲ್ಲಿ ಜಾರಿಗೆ ತರಬೇಕೆಂದು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪಾಲಿಕೆಯು ನಗರದಲ್ಲಿ 210 ಆಟೋ ರಿಕ್ಷಾಗಳ ನೋಂದಣಿ ಮಾಡದೆ ವಿಳಂಬ ನೀತಿ ಅನುಸರಿಸುತ್ತಿದೆ. ಹಾಗಾಗಿ ನೋಂದಣಿ ಪ್ರಕ್ರಿಯೆಯನ್ನು ತಕ್ಷಣ ಜಾರಿಗೊಳಿಸಬೇಕು. ಜಿಲ್ಲೆಯ ರಿಕ್ಷಾ ಚಾಲಕರ ಸಂಘಗಳು ಸಾರಿಗೆ ಪ್ರಾಧಿಕಾರದ ಸಭೆಗಳಿಗೆ ಬಾರದೆ ಪ್ರಾಧಿಕಾರದ ನಿಯಮ ಮತ್ತು ನೀತಿಗಳ ತೀರ್ಮಾನಗಳ ವಿರುದ್ಧ ಜನಪ್ರತಿನಿಧಿಗಳ ಮೂಲಕ ಜಿಲ್ಲಾಡಳಿತಕ್ಕೆ ಒತ್ತಡ ತರುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ನಾವು ಒಮ್ಮತದ ಹೋರಾಟದಿಂದ ಎದುರಿಸುತ್ತೇವೆ ಎಂದು ಹೇಳಿದರು.
ಪರವಾನಿಗೆ ಇಲ್ಲದೆ ನಗರದಲ್ಲಿ ಸಂಚರಿಸುತ್ತಿದ್ದ ಇಲೆಕ್ಟ್ರಿಕ್ ಆಟೊ ರಿಕ್ಷಾಗಳನ್ನು ನ.25ರಿಂದ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಈ ನಮ್ಮ ಬೇಡಿಕೆಗೆ ಶಾಸಕರು, ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಅಶೋಕ್ ಶೆಟ್ಟಿ ಬೋಳಾರ, ಭರತ್ ಕುಮಾರ್, ಶೇಖರ್ ದೇರಳಕಟ್ಟೆ, ಅಬೂಬಕ್ಕರ್ ಸುರತ್ಕಲ್ ಉಪಸ್ಥಿತರಿದ್ದರು.