ಶೇ.51ರಷ್ಟು ಸರಕಾರಿ ಯೋಜನೆಗಳು ವಿಳಂಬ, ವೆಚ್ಚ ಶೇ.22ರಷ್ಟು ಹೆಚ್ಚಳ: ವರದಿ
ಹೊಸದಿಲ್ಲಿ: ಡಿಸೆಂಬರ್ 1, 2022ಕ್ಕೆ ಇದ್ದಂತೆ 150 ಕೋ.ರೂ. ಮತ್ತು ಹೆಚ್ಚಿನ ವೆಚ್ಚದ ಶೇ.51ಕ್ಕೂ ಅಧಿಕ ಸರಕಾರಿ ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬ ಎದುರಿಸುತ್ತಿರುವುದನ್ನು ಸರಕಾರದ ದತ್ತಾಂಶಗಳು ತೋರಿಸಿವೆ. ನವಂಬರ್ 2020ರಲ್ಲಿ ಶೇ.32ರಷ್ಟು ಯೋಜನೆಗಳು ಮತ್ತು ಮಾರ್ಚ್ 2018ರಲ್ಲಿ ಕೇವಲ ಶೇ.19ರಷ್ಟು ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬ ಎದುರಿಸಿದ್ದವು ಎಂದು newindianexpress.com ವರದಿ ಮಾಡಿದೆ.
ಡಿಸೆಂಬರ್ 1,2022ಕ್ಕೆ ಇದ್ದಂತೆ ವಿಳಂಬದಿಂದಾಗಿ ಯೋಜನೆಗಳ ವೆಚ್ಚ ಶೇ.22ರಷ್ಟು ಏರಿಕೆಯಾದರೆ ಮಾರ್ಚ್ 2018ರಲ್ಲಿ ಶೇ.13ರಷ್ಟು ಏರಿಕೆಯಾಗಿತ್ತು. ಒಟ್ಟು ವೆಚ್ಚ ಹೆಚ್ಚಳವು 4.5 ಲ.ಕೋ.ರೂ.ಗಳಷ್ಟಿದ್ದು,ಇದು ಮೂಲ ಯೋಜನಾ ವೆಚ್ಚದ ಶೇ.22ರಷ್ಟು ಅಧಿಕವಾಗಿದೆ ಎನ್ನುವುದನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯದ ಮೂಲಸೌಕರ್ಯ ಮತ್ತು ಯೋಜನೆ ಮೇಲ್ವಿಚಾರಣೆ ವಿಭಾಗವು ಬಿಡುಗಡೆಗೊಳಿಸಿರುವ ವರದಿಯು ತೋರಿಸಿದೆ.
ಯೋಜನೆಗಳು ಆಮೆಗತಿಯಲ್ಲಿ ಸಾಗುವುದಕ್ಕೆ ಭೂಸ್ವಾಧೀನದಲ್ಲಿ ಮತ್ತು ಅರಣ್ಯ/ಪರಿಸರ ಅನುಮತಿಗಳನ್ನು ಪಡೆದುಕೊಳ್ಳುವಲ್ಲಿ ವಿಳಂಬ,ಮೂಲಸೌಕರ್ಯ ಬೆಂಬಲದ ಕೊರತೆ,ಯೋಜನೆಗೆ ಹಣಕಾಸು ಸಹಭಾಗಿತ್ವದಲ್ಲಿ ವಿಳಂಬ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮುಖ್ಯ ಕಾರಣಗಳಾಗಿವೆ ಎಂದು ವರದಿಯು ಹೇಳಿದೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಉಂಟಾಗಿದ್ದ ವ್ಯತ್ಯಯವು ವಿಳಂಬಕ್ಕೆ ಕಾರಣವಾಗಿರಬಹುದು,ಆದಾಗ್ಯೂ ದೊಡ್ಡ ಪ್ರಮಾಣದ ವಿಳಂಬಗಳು ಕಳವಳಕಾರಿಯಾಗಿವೆ ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಸೆಕ್ಯೂರಿಟಿಸ್ನ ವರದಿಯೊಂದು ಹೇಳಿದೆ. ವಿತ್ತವರ್ಷ 2023ರ ಮೊದಲ ಎಂಟು ತಿಂಗಳುಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಯೋಜನೆಗಳ ಒಟ್ಟು ಸಂಖ್ಯೆಯಲ್ಲಿ ಸ್ಥಿರವಾದ ಇಳಿಕೆಯಾಗುತ್ತಿದೆ,ಈ ನಡುವೆ ಯೋಜನೆಗಳಲ್ಲಿ ಸರಾಸರಿ ವಿಳಂಬವು 42 ತಿಂಗಳುಗಳಷ್ಟಿದೆ.
ರಸ್ತೆಗಳು, ರೈಲು ಮತ್ತು ಪೆಟ್ರೋಲಿಯಂ ಕ್ಷೇತ್ರಗಳಲ್ಲಿ ಹೆಚ್ಚಿನ ವಿಳಂಬವಾಗುತ್ತಿದೆ. ವರದಿಯ ಪ್ರಕಾರ ನವಂಬರ್ ನಲ್ಲಿ 1,476 ಯೋಜನೆಗಳ ಪೈಕಿ ಮುಖ್ಯವಾಗಿ ರಸ್ತೆ ಯೋಜನೆಗಳು ಒಳಗೊಂಡಂತೆ 54 ಯೋಜನೆಗಳು ಪೂರ್ಣಗೊಂಡಿದ್ದವು,756 ಯೋಜನೆಗಳು ಮೂಲ ವೇಳಾಪಟ್ಟಿಗಿಂತ ವಿಳಂಬಗೊಂಡಿದ್ದವು ಮತ್ತು 304 ಯೋಜನೆಗಳಲ್ಲಿ ಹಿಂದಿನ ತಿಂಗಳು ವರದಿಯಾಗಿದ್ದ ಅವುಗಳ ಪೂರ್ಣಗೊಳ್ಳುವಿಕೆ ದಿನಾಂಕಕ್ಕೆ ಹೋಲಿಸಿದರೆ ಹೆಚ್ಚುವರಿ ವಿಳಂಬವಾಗಿತ್ತು. ಈ 304 ಯೋಜನೆಗಳ ಪೈಕಿ 58 ಯೋಜನೆಗಳು 1,000 ಕೋ.ರೂ. ಮತ್ತು ಅಧಿಕ ವೆಚ್ಚದಾಗಿದ್ದವು.