ಉಪ್ಪಿನಂಗಡಿ: ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಿನಂಗಡಿ: ಮೀನು ಹಿಡಿಯಲು ಹೋಗಿ ನೇತ್ರಾವತಿ ನದಿ ನೀರಲ್ಲಿ ಮುಳುಗಿದ್ದ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ಪುತ್ರ ಜನಾರ್ದನ ಗೌಡ (42) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಜನಾರ್ದನ ಬಂದಾರು ಗ್ರಾಮದ ಬೋಲೋಡಿ ನಿವಾಸಿ ಚಂದಪ್ಪ ಪೂಜಾರಿ ಎಂಬವರ ಪುತ್ರ ಮಹೇಶ್ ಎಂಬಾತನೊಂದಿಗೆ ಡಿ.26ರಂದು ಸಂಜೆ ಮುಗೇರಡ್ಕ ಬಳಿ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಸನಿಹದಲ್ಲಿ ನೇತ್ರಾವತಿ ನದಿಯಲ್ಲಿ ಮೀನಿಗಾಗಿ ಬಲೆ ಕಟ್ಟಲು ಬಂದಿದ್ದರು. ಈ ಸಂದರ್ಭ ಜನಾರ್ದನ ನೀರು ಪಾಲಾಗಿದ್ದು, ಇವರ ಜೊತೆಗಿದ್ದ ಮಹೇಶ್ ಈ ಬಗ್ಗೆ ಆ ಸಂದರ್ಭದಲ್ಲಿ ಯಾರಲ್ಲೂ ವಿಷಯ ತಿಳಿಸದೆ ರಾತ್ರಿ ವೇಳೆ ಮಾಹಿತಿ ನೀಡಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಮಹೇಶನಿಗೆ ಹಲ್ಲೆ ನಡೆಸಿದ್ದರೆನ್ನಲಾಗಿತ್ತು.
ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿಕೊಂಡು ಜನಾರ್ದನ ಅವರಿಗಾಗಿ ನಿನ್ನೆ ರಾತ್ರಿಯೇ ಹುಡುಕಾಟ ನಡೆಸಿದ್ದರು. ಡಿ.27ರಂದು ಬೆಳಗ್ಗೆ ನೀರಿನಲ್ಲಿ ಮುಳುಗಿದ ಸುಮಾರು 10 ಮೀಟರ್ ದೂರದಲ್ಲಿ ಜನಾರ್ದನ ಅವರ ಮೃತದೇಹ ಪತ್ತೆಯಾಗಿದೆ.
ಮೃತ ಜನಾರ್ದನ ಕೂಲಿ ಕಾರ್ಮಿಕರಾಗಿದ್ದು, ಮನೆಗೆ ಆಧಾರ ಸ್ತಂಭವಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.