‘ರಾಜಧಾನಿ’ ರೈಲುಗಳಲ್ಲಿ ಆಹಾರ ಪೂರೈಕೆ ಸೇವೆಯ ಕುರಿತು ಕಳೆದ 3 ವರ್ಷಗಳಲ್ಲಿ 6.361 ದೂರು ಸ್ವೀಕಾರ: ರೈಲ್ವೆ ಸಚಿವ

ಹೊಸದಿಲ್ಲಿ, ಡಿ. 27: ‘ರಾಜಧಾನಿ’ ರೈಲುಗಳಲ್ಲಿ ಆಹಾರ ಪೂರೈಕೆ ಸೇವೆಯ ಕುರಿತು ಕಳೆದ ಮೂರು ವರ್ಷಗಳಲ್ಲಿ ಒಟ್ಟು 6,361 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಂಸತ್ತಿಗೆ ತಿಳಿಸಲಾಗಿದೆ. ‘‘ರಾಜಧಾನಿ ರೈಲಿನ ಉಟೋಪಚಾರ ಸೇವೆಯ ಕುರಿತು ಕಳೆದ ಮೂರು ವರ್ಷಗಳ ಕಾಲ, 2022 ಅಕ್ಟೋಬರ್ 31ರ ವರೆಗೆ ಒಟ್ಟು 6.361 ದೂರುಗಳನ್ನು ಸ್ವೀಕರಿಸಲಾಗಿದೆ.
ದಂಡ ಹೇರಿಕೆ, ಶಿಸ್ತು ಹಾಗೂ ಮನವಿ ನಿಯಮ ಕ್ರಮ ಸೇರಿದಂತೆ ಸೂಕ್ತ ಕ್ರಮಗಳನ್ನು ಪ್ರತಿಯೊಂದು ಪ್ರಕರಣಗಳಲ್ಲಿ ತೆಗೆದುಕೊಳ್ಳಲಾಗಿದೆ’’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ರಾಜ್ಯ ಸಭೆಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದರು. ತಪಾಸಣೆಯ ಭಾಗವಾಗಿ ದಿನನಿತ್ಯ ಆಹಾರದ ಮಾದರಿಯನ್ನು ಸಂಗ್ರಹಿಸಲಾಗಿದೆ ಹಾಗೂ ರೈಲುಗಳಲ್ಲಿ ಪೂರೈಕೆಯಾಗುತ್ತಿರುವ ಊಟ ಗುಣಮಟ್ಟವನ್ನು ತಲುಪಿದೆಯೇ ಎಂದು ಖಾತರಿ ನೀಡಲು ಮೇಲ್ವಿಚಾರಣಾ ಕಾರ್ಯವಿಧಾನ ಆರಂಭಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಹಾಗೂ ಇಂದಿನ ದಿನಾಂಕದ ವರೆಗೆ, ರೈಲ್ವೆ/ಐಆರ್ಸಿಟಿಸಿ 787 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಭಾರತದ ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರ ಅಧಿಸೂಚಿಸಿದ ಪ್ರಮಾಣ ಹಾಗೂ ನಿಗದಿತ ಮಾನದಂಡಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಸಲು ಭಾರತೀಯ ರೈಲ್ವೆ ನಿರಂತರ ಪ್ರಯತ್ನಿಸಲಿದೆ ಎಂದು ಅವರು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.





