ಮಂಗಳೂರು: ಅತ್ಯಾಚಾರ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಅಪ್ರಾಪ್ತ ಸೊಸೆಯ ಅತ್ಯಾಚಾರ ಎಸಗಿದ ಆರೋಪದಲ್ಲಿ 32 ವರ್ಷದ ವ್ಯಕ್ತಿಗೆ 15 ವರ್ಷಗಳ ಕಠಿಣ ಶಿಕ್ಷೆ ಹಾಗೂ 50,000 ರೂ. ದಂಡವನ್ನು ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್‌ಟಿಎಸ್‌ಸಿ-II (ಪೋಕ್ಸೊ) ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಮಂಗಳವಾರ ತೀರ್ಪು ನೀಡಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರವನ್ನು ನೀಡಲು ನ್ಯಾಯಾಲಯ ಆದೇಶಿಸಿದೆ.
2021ರ ಆಗಸ್ಟ್ 9ರಂದು ವಿದ್ಯಾರ್ಥಿನಿ ಶಾಲೆಯಿಂದ ತನ್ನ ಸ್ನೇಹಿತೆಯ ಜೊತೆ ಮನೆಗೆ ಹಿಂದಿರುಗುತ್ತಿದ್ದಾಗ, ಆರೋಪಿ ಅವರಿಬ್ಬರನ್ನು ಹಿಂಬಾಲಿಸಿದ್ದಲ್ಲದೆ ಸಂತ್ರಸ್ತೆಯ ಸ್ನೇಹಿತೆಯನ್ನು ಬೆದರಿಸಿ ವಾಪಸ್ ಕಳುಹಿಸಿದ್ದ. ನಂತರ ಆರೋಪಿಯು ಸಂತ್ರಸ್ತೆ ಬಳಿ ಫೋನ್ ನಂಬರ್ ಕೇಳಿದ್ದು, ಆಕೆ ಕೊಡಲು ನಿರಾಕರಿಸಿ ಮುಂದೆ ಹೋದಾಗ ತಡೆದು ಬಲವಂತವಾಗಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ಯುವುದನ್ನು ಗಮನಿಸಿದ್ದ ಸ್ನೇಹಿತೆಯು ಮನೆಗೆ ತೆರಳಿ ವಿಷಯ ತಿಳಿಸಿದ್ದಳು. ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ತಿಳಿದ ತಾಯಿಯು ದೂರು ದಾಖಲಿಸಿದ್ದರು. ಆರೋಪಿ ಯಾರಿಗೂ ಏನನ್ನೂ ಹೇಳದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ.
ಪ್ರಕರಣ ದಾಖಲಾದ ನಂತರ ಆಗಸ್ಟ್ 15 ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ತನಿಖೆ ನಡೆಸಿದ್ದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಮಣ ಸ್ವಾಮಿ ಸಂತ್ರಸ್ತೆಯ ಪರ ವಾದಿಸಿದ್ದರು.