ಉಕ್ರೇನ್ ಯುದ್ಧದ ಮುಖ್ಯ ಫಲಾನುಭವಿ ಅಮೆರಿಕ: ರಶ್ಯ ವಿದೇಶಾಂಗ ಸಚಿವ ಲಾವ್ರೋವ್

ಮಾಸ್ಕೊ,ಡಿ.7: ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕವು ‘ಮುಖ್ಯ ಫಲಾನುಭವಿಯಾಗಿದೆ’ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯಿ ಲಾವ್ರೊವ್(Sergey Lavrov) ಹೇಳಿದ್ದಾರೆ. ನ್ಯಾಟೊ ಜೊತೆಗೂಡಿ ಅಮೆರಿಕವು ರಶ್ಯವನ್ನು ಧ್ವಂಸಗೊಳಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಶ್ಯವು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಪ್ರದೇಶಗಳನ್ನು ತನಗೆ ಒಪ್ಪಿಸಬೇಕೆಂಬ ಮಾಸ್ಕೊದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಬೇಕು ಇಲ್ಲವೇ ಈ ವಿಷಯವನ್ನು ರಶ್ಯವೇ ಖುದ್ದಾಗಿ ಬಗೆಹರಿಸಲಿದೆಯೆಂದು ಲಾವ್ರೋವ್ ಉಕ್ರೇನ್ ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಈಗ ನಡೆಯುತ್ತಿರುವ ಸಂಘರ್ಷದಲ್ಲಿ ಚೆಂಡು ಉಕ್ರೇನ್ ಆಡಳಿತದ ಬಳಿಯಿದೆ. ವಾಶಿಂಗ್ಟನ್ ಅದರ ಹಿಂದೆ ನಿಂತಿದೆ ಎಂದು ಲಾವ್ರೋ ರಶ್ಯದ ಅಧಿಕೃತ ಸುದ್ದಿಸಂಸ್ತೆಗೆ ತಾಸ್ ಗೆ ತಿಳಿಸಿದ್ದಾರೆ. ‘‘ ಇಂತಹ ವಿವೇಕರಹಿತ ಪ್ರತಿರೋಧವನ್ನು ಇವರಿಬ್ಬರೂ ಯಾವುದೇ ಕ್ಷಣದಲ್ಲಿ ನಿಲ್ಲಿಸಬಹುದಾಗಿದೆ’’ ಎಂದು ಲಾವ್ರೊವ್ ವ್ಯಂಗ್ಯವಾಡಿದರು.
ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ‘ಶಾಂತಿ ಶೃಂಗಸಭೆ’ಯೊಂದನ್ನು ನಡೆಸಲು ಉಕ್ರೇನ್ ಬಯಸುತ್ತಿದೆ. ಆದರೆ ರಶ್ಯವು ಅದರಲ್ಲಿ ಪಾಲ್ಗೊಳ್ಳುವುದು ಎಂಬುದನ್ನು ತಾನು ನಿರೀಕ್ಷಿಸುವುದಿಲ್ಲವೆಂದು ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಹೇಳಿಕೆ ನೀಡಿದ ಮರುದಿನವೇ ಲಾವ್ರೊ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿ, ಯುದ್ಧಮುಂಚೂಣಿಯ ಪ್ರದೇಶವಾದ ಡೊನ್ಬಾಸ್ನಲ್ಲಿ ಪರಿಸ್ಥಿತಿ ಅತ್ಯಂತ ಕಷ್ಟಕರ ಹಾಗೂ ಯಾತನಾಮಯವಾಗಿದೆ . ದೇಶವು ತನ್ನ ಎಲ್ಲಾ ಶಕ್ತಿ ಹಾಗೂ ಗಮನವನ್ನು ಅದೆರೆಡೆಗೆ ಕೇಂದ್ರೀಕರಿಸಬೇಕಾಗಿದೆ ಎಂದು ಹೇಳಿದ್ದಾರೆ.