ಸುರತ್ಕಲ್: ಜಲೀಲ್ ಕುಟುಂಬಕ್ಕೆ ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಂದ ಸಾಂತ್ವನ

ಸುರತ್ಕಲ್: ಕೊಲೆಗೀಡಾದ ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಮಂಗಳೂರಿನ ನಾಗರಿಕ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ದುಃಖಿತ ಕುಟುಂಬಕ್ಕೆ ಮಂಗಳವಾರ ಬೆಳಗ್ಗೆ ಸಾಂತ್ವನ ಹೇಳಿತು. ಕೊಲೆಗಡುಕರಿಗೆ ಶಿಕ್ಷೆ ನೀಡಲು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮತಾಂಧತೆಯನ್ನು ತಲೆಗೆ ತುಂಬಿಸಿಕೊಂಡ ಹುಡುಗರು ಅಂಗಡಿಗೆ ನುಗ್ಗಿ ಕೊಲೆ ಮಾಡುವಂತದ್ದನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಕೃತ್ಯಗಳನ್ನು ನಾಗರಿಕ ಸಮಾಜ ಒಟ್ಟಾಗಿ ವಿರೋಧಿಸಬೇಕಿದೆ ಎಂದು ತಿಳಿಸಿದರು.
ಧರ್ಮಾಂಧತೆಯ ನಶೆಯನ್ನು ತಲೆಯಲ್ಲಿ ತುಂಬಿಕೊಂಡಿರುವ ಯುವಕರು ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ, ಯುವಕರ ಭವಿಷ್ಯ ಹಾಳಾಗಿ ಅವರ ಜೀವನ ಕತ್ತಲೆಯಾಗುತ್ತದೆ. ಈ ಕೊಲೆಯನ್ನು ಖಂಡಿಸುವುದು ಮತ್ತು ಜಲೀಲ್ ಕುಟುಂಬದ ಜೊತೆ ನಿಂತು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವುದು ನಾಗರಿಕ ಸಮಾಜದ ಕರ್ತವ್ಯ ಮತ್ತು ಜವಾಬ್ದಾರಿ. ಹಾಗಾಗಿ ಸಮಾನ ಮನಸ್ಕ ಸಂಘಟನೆಗಳು, ನಾಗರಿಕ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿಕೊಂಡು ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ದ.ಕ. ಜಿಲ್ಲೆಯ ಇಡೀ ನಾಗರಿಕ ಸಮಾಜ ಸಂತ್ರಸ್ತರ ಜೊತೆ ಇದೆ ಎಂಬ ಸಂದೇಶವನ್ನು ನೀಡಿದ್ದೇವೆ ಎಂದರು.
ಕೃಷ್ಣಾಪುರದ ಜಲೀಲ್ ಅವರ ಕೊಲೆ ಖಂಡನೀಯ. ಜಿಲ್ಲೆಯಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದರಿಂದಾಗಿ ಮುಸ್ಲಿಂ ಸಮುದಾಯದಲ್ಲಿ ಆತಂಕದ ವಾತಾರವರಣದಲ್ಲಿ ನಿರ್ಮಾಣವಾಗಿದೆ. ಕೊಲೆ, ದೌರ್ಜನ್ಯಗಳು ನಡೆಯುತ್ತಿರುವುದು ಇಡೀ ಮಾನವ ಸಮುದಾಯವೇ ತಲೆ ತಗ್ಗಿಸುವಂತಹ ವಿಚಾರ. ಈ ಬಗ್ಗೆ ಸರಕಾರ ಬಂಧಿತರನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕೃತ್ಯದ ಹಿಂದಿರುವ ಶಕ್ತಿಗಳನ್ನೂ ಪತ್ತೆಹಚ್ಚಿ ಅವರಿಗೂ ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡುವಂತೆ ಮಾಡಬೇಕೆಂಬುದು ಸರಕಾರದ ಜವಾಬ್ದಾರಿ ಎಂದು ಅವರು ನುಡಿದರು.
ರಾಜಕೀಯ ಒತ್ತಡಗಳಿಗೆ ಒಳಗಾಗದೇ ಸಂವಿಧಾನ, ಕಾನೂನಿಗೆ ಗೌರವಕೊಟ್ಟು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಅವರಿಗೆ ನೀಡಿದ 25ಲಕ್ಷ ರೂ. ಪರಿಹಾರ ನೀಡಿದಂತೆಯೇ ಮಸೂದ್ ಮತ್ತು ಫಾಝಿಲ್ ಅವರಿಗೂ ತಾರತಮ್ಯ ಮಾಡದೇ ಪರಿಹಾರ ವಿತರಿಸಬೇಕು. ಜೊತೆಗೆ ಜಲೀಲ್ ಕುಟುಂಬಕ್ಕೂ ಪರಿಹಾರದ 25 ಲಕ್ಷ ರೂ. ವಿತರಿಸಬೇಕು. ಪ್ರವೀಣ್ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿದಂತೆ ಈ ಎಲ್ಲಾ ಸಂತ್ರಸ್ತ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಸಂವಿಧಾನ ಎಲ್ಲರಿಗೂ ಒಂದೇ ರೀತಿಯ ಅವಕಾಶಗಳನ್ನು ನೀಡಿದೆ ಅದರಂತೆ ಪರಿಹಾರ ವಿತರಣೆ ಮಾಡಬೇಕು ಎಂದು ಹಿರಿಯ ದಲಿತ ನಾಯಕ ಎಂ. ದೇವದಾಸ್ ಅವರು ಸರ್ಕಾರವನ್ನು ಆಗ್ರಹಿಸಿದರು.
ಜಯ ಕರ್ನಾಟಕ ಸುರತ್ಕಲ್ ಅಧ್ಯಕ್ಷ ವೈ.ರಾಘವೇಂದ್ರ ರಾವ್ ಮಾತನಾಡಿ, ಮೃತ ಜಲೀಲ್ ಅವರ ಮನೆಯ ಪರಿಸ್ಥಿತಿ ಮತ್ತು ಅವರ 10 ತಿಂಗಳ ಮಗುವಿನ ಭವಿಷ್ಯದ ಕುರಿತು ಯೋಚನೆ ಮಾಡುವಾಗ ಬೇಸರವಾಗುತ್ತದೆ. ಸಮಾನ ಮನಸ್ಕರಾದ ನಾವೆಲದ್ಲರೂ ಕೊಲೆ ಮಾಡುವಂತಹಾ ಮಾನಸಿಕತೆ ಇರುವ ಯುವ ಸಮುದಾಯವನ್ನು ಯಾವ ರೀತಿಯಲ್ಲಿ ಅವರನ್ನು ಬದಲಾಯಿಸಬಹುದು ಎಂಬ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಾದ ಸ್ಥಿತಿಗೆ ತಲುಪಿದ್ದೇವೆ. ಒಂದೆಡೆ ಇಂತಹ ಮನಸ್ಥಿತಿಗಳು ಮತ್ತು ಇನ್ನೊಂದೆಡೆ ತಾರತಮ್ಯ ನೀತಿ ಅನುಸರಿಸುತ್ತಿರುವ ಸರಕಾರ ಮತ್ತು ಅದರ ಜನಪ್ರತಿನಿಧಿಗಳು. ವಿಪರ್ಯಾಸವೆಂದರೆ, ಆಡಳಿತ ಪಕ್ಷ ಯಾವೊಬ್ಬ ಜನಪ್ರತಿನಿಧಿಯೂ ಸಂತ್ರಸ್ತರ ಮನೆಗೆ ಭೇಟಿ ನೀಡಿ ಕನಿಷ್ಠ ಸಾಂತ್ವನವನ್ನೂ ಹೇಳಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಎಡಪದವು ಬಜರಂಗದಳದ ಸಭೆಯೊಂದರಲ್ಲಿ ಕೋಮುಧ್ವೇಷ ತುಂಬಿದ್ದ ಮಾತುಗಳನ್ನೇ ಆಡಿದ್ದರು. ಅವರು ಒಬ್ಬ ವೈದ್ಯನಾಗಿ ಅವರ ದೇಹದ ತುಂಬೆಲ್ಲಾ ಇಂತಹ ವಿಷ ತುಂಬಿಕೊಂಡಿರುವುದು ನಿಜಕ್ಕೂ ಈ ಸಮಾಜಕ್ಕೆ ಆಘಾತಕಾರಿ ಬೆಳವಣಿಗೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಫಲರಾಗಿದ್ದು, ಅದಕ್ಕಾಗಿ ಮತ ದ್ರುವೀಕರಣದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಅನೈತಿಕ ಗೂಂಡಾಗಿರಿ ನಡೆದಿದೆ. ಎಲ್ಲಾ ಗೂಂಡಾಗಿರಿಯ ನೇತೃತ್ವವನ್ನು ಸಂಘಪರಿವಾರವೇ ವಹಿಸಿಕೊಂಡಿದೆ. ಜಲೀಲ್ ಸೇರಿದಂತೆ ಅನೈತಿಕ ಗೂಂಡಾಗಿರಿಯ ಎಲ್ಲಾ ಸಂತ್ರಸ್ತರಿಗೂ ಸೂಕ್ತ ನ್ಯಾಯ ದೊರೆಯಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿಆಗ್ರಹಿಸಿದ್ದಾರೆ.
ನಿಯೋಗದಲ್ಲಿ ರಘು ಎಕ್ಕಾರು, ಸಿಪಿಐ ಮುಂದಾಳು ವಿ.ಕುಕ್ಯಾನ್, ಮಾಜಿ ಮೇಯರ್ ಹಾಗೂ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಮಾಜಿ ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಕಾರ್ಮಿಕ ನಾಯಕರುಗಳಾದ ಸದಾಶಿವ ಶೆಟ್ಟಿ ಸುರತ್ಕಲ್, ಕರುಣಾಕರ ಮಾರಿಪಳ್ಳ, ಮಾಜಿ ಕಾರ್ಪೊರೇಟರ್ ಗಳಾದ ದಯಾನಂದ ಶೆಟ್ಟಿ, ಅಯಾಝ್ ಕೃಷ್ಣಾಪುರ, ಅಬೂಬಕ್ಕರ್ ಕುದ್ರೋಳಿ, ಡಿವೈಎಫ್ಐ ಪದಾಧಿಕಾರಿಗಳಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ರಫೀಕ್ ಹರೇಕಳ, ಮುಸ್ಲಿಂ ಐಕ್ಯತಾ ವೇದಿಕೆಯ ಯಾಸೀನ್ ಕುದ್ರೋಳಿ, ಅಶ್ರಫ್ ಕಾನ, ಸಾಮಾಜಿಕ ಕಾರ್ಯಕರ್ತರಾದ ಪ್ರಮೀಳಾ ದೇವಾಡಿಗ, ಅಸುಂತಾ ಡಿ.ಸೋಜ, ಪ್ರಮೀಳಾ ಕಾವೂರು, ಸಿಲ್ವಿಯಾ ಜೋಕಟ್ಟೆ, ಆಶಾ ಬೋಳೂರು, ಶ್ರೀಕಾಂತ್ ಸಾಲ್ಯಾನ್, ಮೂಸಬ್ಬ ಪಕ್ಷಿಕೆರೆ, ಶಾಹುಲ್ ಹಮೀದ್ ಬಜ್ಪೆ, ಸಾಲಿ ಮರವೂರು, ಸಿರಾಜ್ ಬಜ್ಪೆ, ಬಶೀರ್ ಕೃಷ್ಣಾಪುರ, ನಾಸಿರ್ ಕೃಷ್ಣಾಪುರ, ಸ್ಥಳೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಅಬ್ದುಲ್ ರಕೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜೀವಗಳನ್ನು ಕಳೆದುಕೊಂಡ ನೋವು ಆಯಾ ಕುಟುಂಬಕ್ಕೆ ಮಾತ್ರ ತಿಳಿಯುತ್ತದೆ. ಹಾಗಾಗಿ ಜಲೀಲ್ ಪ್ರಕರಣದ ಆರೋಪಿಗಳಿಗೆ ನೀಡುವ ಶಿಕ್ಷೆಯು ಇಂತಹ ಕೃತ್ಯಗಳನ್ನು ಮುಂದಿನ ದಿನಗಳಲ್ಲಿ ಎಸಗುವವರಿಗೆ ಉತ್ತಮ ಪಾಠವಾಗುವಂತಹಾ ಕಠಿಣ ಶಿಕ್ಷೆಗಳನ್ನು ನೀಡಬೇಕು ಎಂಬುವುದು ಜಲೀಲ್ ಕುಟುಂಬದ ಆಗ್ರಹ ಮತ್ತು ನಮ್ಮ ಆಗ್ರಹವೂ ಆಗಿದೆ ಎಂದು ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್ ನುಡಿದರು.
ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ನಾಗರೀಕ ಸಮಾಜದ ಜವಾಬ್ದಾರಿಗಳನ್ನು ಸಮಾನ ಮನಸ್ಕ ಸಂಘಟನೆಗಳು, ನಾಗರಿಕ ಸಂಘಟನೆಗಳು, ಜಾತ್ಯತೀತ ಮನೋಭಾವದ ಪಕ್ಷಾತೀತ ಜನಪ್ರತಿಮನಿಧಿಗಳು, ಮುಖಂಡರು ನಿರ್ವಹಿಸುತ್ತೇವೆ. ಸರಕಾರದ ಅವರ ಜವಾಬ್ದಾರಿಗಳನ್ನು ನಿರ್ವಹಿಸಿ ಈ ಕುಟುಂಬಕ್ಕೆ ಪರಿಹಾರವನ್ನು ಒದಗಿಸಬೇಕು.
ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷ, ಡಿವೈಎಫ್‌ಐ