ಶಾಂತಿ ಕದಡುವ ಶಕ್ತಿಗಳ ವಿರುದ್ಧ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.26: ಸಮಾಜದಲ್ಲಿ ಶಾಂತಿ ಕದಡುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಆದರೆ, ಮತಗಳನ್ನು ಕಳುವು ಮಾಡುವುದು, ಅಗತ್ಯಕ್ಕೆ ಅನುಗುಣವಾಗಿ ಸೇರಿಸುವುದು, ತೆಗೆಯುವುದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ನಿಮ್ಮ ಕಡೆ ಆ ಅನುಭವ ಹೆಚ್ವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಭಯೋತ್ಪಾದನೆ ಕುರಿತು ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಸ್ತಾಪಿಸಿದ ವಿಷಯದ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು.
ಬಿಎಲ್ಎ ಗಳನ್ನು ನೇಮಕ ಮಾಡುವ ಅಧಿಕಾರ ನಮ್ಮ ಸರಕಾರ ಯಾವ ಸಂಸ್ಥೆಗೂ ನೀಡಿಲ್ಲ. 2017ರಲ್ಲಿ ಕಾಂಗ್ರೆಸ್ ಸರಕಾರವೆ ಅಂತಹ ಆದೇಶ ಮಾಡಿದೆ. ಚಿಲುಮೆ ಸಂಸ್ಥೆ ಪ್ರಕರಣ ಕುರಿತು ಚುನಾವಣಾ ಆಯೋಗ ತನಿಖೆ ಮಾಡುತ್ತಿದೆ. ಆರೋಪಿಗಳು ಜೈಲು ಸೇರಿದ್ದಾರೆ. ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈ ಬಿಟ್ಟಿರುವುದು ಸಾಬೀತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಆದರೆ, ಭಯೋತ್ಪಾದನೆ ಅನ್ನೋದು ತುಂಬಾ ಗಂಭೀರ ವಿಚಾರ. ಅದರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣ ಕುರಿತು ಎನ್ ಐಎ ತನಖೆ ನಡೆಯುತ್ತಿದೆ. ಸತ್ಯಾಂಶ ಹೊರಗೆ ಬಂದೇ ಬರುತ್ತದೆ ಎಂದು ಅವರು ಹೇಳಿದರು.





