40 ದಿನ ಸಮುದ್ರದಲ್ಲೇ ಕಳೆದು ಕೊನೆಗೂ ಇಂಡೊನೇಶ್ಯ ತಲುಪಿದ 174 ರೋಹಿಂಗ್ಯ ನಿರಾಶ್ರಿತರು
ಪ್ರಯಾಣಿಕರಲ್ಲಿ ಕನಿಷ್ಠ 20 ಮಂದಿ ಸಾವು

ಜಕಾರ್ತ,ಡಿ.27: ಸಮುದ್ರದಲ್ಲಿ ಹಲವಾರು ವಾರಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಕನಿಷ್ಠ 174 ರೋಹಿಂಗ್ಯಗಳಿದ್ದ ದೋಣಿಯು ಇಂಡೊನೇಶ್ಯದ ಉತ್ತರದ ಪ್ರಾಂತವಾದ ಅಸೆಹ್ನ ಕರಾವಳಿಗೆ ಸೋಮವಾರ ತಲುಪಿದೆ. ಹಲವರು ವಾರಗಳ ಕಾಲ ಆಹಾರದ ಕೊರತೆಯಿಂದ ಕಂಗಾಲಾಗಿದ್ದ ಅವರಲ್ಲಿ ಹಲವರು ನಿರ್ಜಲೀಕರಣಕ್ಕೆ ಒಳಗಾಗಿದ್ದಾರೆಂದು ಸ್ಥಳೀಯ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೊನೇಶ್ಯವನ್ನು ತಲುಪುವ ಪ್ರಯತ್ನವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 200 ಮಂದಿಯ ರೋಹಿಂಗ್ಯ ನಿರಾಶ್ರಿತರ ತಂಡವೊಂದು ಸಣ್ಣ ದೋಣಿಯಲ್ಲಿ ಬಾಂಗ್ಲಾದೇಶದಿಂದ ಪ್ರಯಾಣಿಸಿದ್ದರು, ಅವರಲ್ಲಿ 20 ಮಂದಿ ಸಮುದ್ರದಲ್ಲಿ ಮೃತಪಟ್ಟರೆಂದು, ದೋಣಿಯಲ್ಲಿ ಆಗಮಿಸಿದ ಸಂತ್ರಸ್ತರಲ್ಲೊಬ್ಬರಾದ ಶಫೀಕ್ ರಹ್ಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ದೋಣಿಯಲ್ಲಿ 32 ಮಕ್ಕಳು ಕೂಡಾ ಇದ್ದರೆಂದು ಅವರು ಹೇಳಿದ್ದಾರೆ.
ದೋಣಿಯಲ್ಲಿದ್ದವರು ಅತ್ಯಂತ ಕೃಶಕಾಯರಾಗಿದ್ದರು ಹಾಗೂ ಬಳಲಿದಂತೆ ಕಂಡುಬರುತ್ತಿದ್ದರು ಎಂದು ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರು ತಿಳಿಸಿದ್ದಾರೆ.
ಸುಮಾರು 40 ದಿನಗಳ ಕಾಲ ತಾವು ಸಮುದ್ರದಲ್ಲೇ ಸಿಕ್ಕಿಹಾಕಿಕೊಂಡಿದ್ದೆವು ಎಂದು ಹೇಳಿದ ಆತ ಪ್ರಯಾಣ ಆರಂಭಿಸಿದ ಹತ್ತೇ ದಿನಗಳಲ್ಲಿ ಆಹಾರದ ಕೊರತಯುಂಟಾಯಿತು ಎಂದಾತ ಹೇಳಿದ್ದಾನೆ. ಅಲ್ಲದೆ ದೋಣಿಯಲ್ಲಿ ತೂತು ಸಹಕಾಣಿಸಿಕೊಂಡು ಅಪಾಯಕ್ಕೆ ಸಿಲುಕಿತ್ತು . ಆದರೂ, ಅಲ್ಲಾಹುವಿನ ದಯೆಯಿಂದ ತಾವು ಈ ಸ್ಥಳವನ್ನು ತಲುಪಿದ್ದೇವೆ’’ ಎಂದಾತ ಹೇಳಿದ್ದಾನೆ.ಸಂತ್ರಸ್ತ ರೋಹಿಂಗ್ಯಾಗಳಿಗೆ ಪೀಡಿ ಜಿಲ್ಲೆಯಲ್ಲಿ ತಾತ್ಕಾಲಿಕ ಶಿಬಿರಗಳನ್ನು ಏರ್ಪಡಿಸಲಾಗಿದ್ದು, ಅಲ್ಲಿ 25ಕ್ಕೂ ಅಧಿಕ ಮಂದಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.







