ಕೋವಿಡ್ ನಿರ್ಬಂಧ ಸಡಿಲಿಸಿದ ಚೀನಾ: ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ

ಬೀಜಿಂಗ್,ಡಿ.27: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ ವರದಿಯಾಗುತ್ತಿರುವ ಹೊರತಾಗಿಯೂ, ಜನವರಿ 8ರಿಂದ ವಿದೇಶಗಳಿಂದ ಆಗಮಿಸುವ ವಿಮಾನ ಪ್ರಯಾಣಿಕರಿಗೆ ಕ್ವಾರಂಟೈನ್ ವಿಧಿಸುವುದನ್ನು ರದ್ದುಡಿಸಿರುವುದಾಗಿ ಚೀನಾ ಮಂಗಳವಾರ ಘೋಷಿಸಿದೆ.ಕೋವಿಡ್ ಹಾವಳಿಯ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಚೀನಾವು ವಿದೇಶ ಪ್ರಯಾಣಕ್ಕೆ ನಿರ್ಬಂಧಗಳನ್ನು ವಿಧಿಸಿತ್ತು. ಇದೀಗ ಆ ಎಲ್ಲಾ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಕಳೆಗುಂದಿದ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶವನ್ನು ಚೀನಾ ಆಡಳಿತ ಹೊಂದಿದೆ.
ಇನ್ನು ಮುಂದೆ ಚೀನಾಕ್ಕೆ ಆಗಮಿಸುವ ಜನರು ತಮ್ಮ ದೇಶದಿಂದ ನಿರ್ಗಮಿಸಿದ 48 ತಾಸುಗಳೊಳಗೆ ಕೋವಿಡ್ ನೆಗೆಟ್ ಪರೀಕ್ಷೆಗೊಳಗಾದರೆ ಸಾಕಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ಸೋಮವಾರ ತಿಳಿಸಿದೆ. ಈವರೆಗೆ ವಿದೇಶದಿಂದ ಆಗಮಿಸುವವರು ಒಟ್ಟು ಎಂಟು ದಿನಗಳನ್ನು ಕ್ವಾರಂಟೈನ್ನಲ್ಲಿ ಕಳೆಯಬೇಕಾಗುತ್ತದೆ. ಮೊದಲ ಐದು ದಿನಗಳ ಕಾಲ ಅವರು ನಿಯೋಜಿತವಾದ ಹೊಟೇಲ್ ಅಥವಾ ಸಂಸ್ಥಾಪನೆಗಳಲ್ಲಿ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ, ಆನಂತರ ಮೂರು ದಿನಗಳನ್ನು ಮನೆಯಲ್ಲಿ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ.
ವೀಸಾ ತ್ವರಿತ ವಿಲೇವಾರಿ:
ಅಲ್ಲದೆ ಉದ್ಯಮದಿಂದ ಹಿಡಿದು ಶಿಕ್ಷಣ ಅಥವಾ ಕುಟುಂಬಿಕರನ್ನು ಭೇಟಿಯಾಗಲು ಚೀನಾಕ್ಕೆ ಪ್ರಯಾಣಿಸಲು ಇಚ್ಛಿಸುವವರಿಗೆ ವೀಸಾ ಅರ್ಜಿಗಳ ತ್ವರಿತ ವಿಲೇವಾರಿಗೆ ಏರ್ಪಾಡುಗಳನ್ನು ಮಾಡಲಾಗುವುದೆಂದು ಕೂಡಾ ಅದು ಹೇಳಿದೆ. ಕೋವಿಡ್ ಹಾವಳಿಯ ಬಳಿಕ ಚೀನಾಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯು ಹೆಚ್ಚು ಕಮ್ಮಿ ಶೂನ್ಯ ಮಟ್ಟಕ್ಕೆ ಇಳಿದಿತ್ತು. ಈ ಮಧ್ಯೆ ಚೀನಾ ಹಾಗೂ ಉಳಿದ ದೇಶಗಳ ನಡುವೆ ಇರುವೆ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ನಿಗದಿಪಡಿಸಲಾಗಿದ್ದ ಮಿತಿಯನ್ನು ಕೂಡಾ ಕೈಬಿಡಲಾಗಿದೆ.