ಸುಳ್ಯ: ಪ್ರತ್ಯೇಕ ಘಟನೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಪತ್ತೆ

ಸುಳ್ಯ: ಕಳೆದ ಕೆಲವು ತಿಂಗಳ ಹಿಂದೆ ಪ್ರತ್ಯೇಕ ಘಟನೆಗೆ ಸಂಬಂಧಿಸಿದ ಕಾಣೆಯಾಗಿದ್ದ ಸಂಪಾಜೆ ಮೂಲದ ಇಬ್ಬರು ಮಹಿಳೆಯರನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ನಾಪತ್ತೆ ದೂರು ದಾಖಲು ಮಾಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಮಹಿಳೆಯರನ್ನು ಪತ್ತೆ ಹಚ್ಚಲು ಜಿಲ್ಲೆಯ ಮತ್ತು ರಾಜ್ಯದ ಬೇರೆ ಬೇರೆ ಕಡೆಗಳಿಂದ ಅವರ ಮಾಹಿತಿಯನ್ನು ಸಂಗ್ರಹಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿರುವ ಸುಳ್ಯ ಪೊಲೀಸರು ಮಹಾಲಕ್ಷ್ಮಿ ಎಂಬವರನ್ನು ಬೆಳ್ತಂಗಡಿ ಪರಿಸರದಲ್ಲಿ ಪತ್ತೆ ಹಚ್ಚಿದರೆ, ನಾಗವೇಣಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಮಹಾಲಕ್ಷ್ಮಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ರಬ್ಬರ್ ಟೇಪಿಂಗ್ ಕೆಲಸಕ್ಕೆ ಸೇರಿಕೊಂಡು ಅಲ್ಲಿರುವ ಮಾಹಿತಿ ಸಂಗ್ರಹಿಸಿದ ಪೊಲೀಸರು ಅಲ್ಲಿಗೆ ತೆರಳಿ ಆಕೆಯನ್ನು ಸುಳ್ಯ ಠಾಣೆಗೆ ಕರೆತಂದು ಮನೆಯವರನ್ನು ಕರೆಸಿ ಮಾತುಕತೆ ನಡೆಸಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ನಾಗವೇಣಿ ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಇರುವ ಮಾಹಿತಿ ಸಂಗ್ರಹಿಸಿದ ಸುಳ್ಯ ಪೊಲೀಸರು ಆಕೆಯ ಪತಿಯನ್ನು ಮಹಿಳೆ ಇರುವ ಸ್ಥಳಕ್ಕೆ ಕರೆದೊಯ್ದು ವಿಚಾರಿಸಿದಾಗ ಆಕೆ ತನ್ನ ಪತಿಯೊಂದಿಗೆ ಬರಲು ನಿರಾಕರಿಸಿದ್ದು ಪ್ರಿಯಕರನೊಂದಿಗೆ ಇರುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಅವರಿಬ್ಬರ ಹೇಳಿಕೆಗಳನ್ನು ಪಡೆದು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಮತ್ತು ಸಿಬ್ಬಂದಿಗಳು ಭಾಗವಹಿಸಿದರು.