ಜಮ್ಮು: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ

ಶ್ರೀನಗರ: ಇಂದು ಬೆಳಗ್ಗೆ ಜಮ್ಮುವಿನ ಹೊರವಲಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಪ್ರದೇಶದಲ್ಲಿ ಟ್ರಕ್‌ನ ಅನುಮಾನಾಸ್ಪದ ಚಲನವಲನವಿತ್ತು. ಪೊಲೀಸರು ಚೆಕ್ ಪೋಸ್ಟ್‌ನಲ್ಲಿ ಟ್ರಕ್ ಅನ್ನು ನಿಲ್ಲಿಸಿದರು. ಭದ್ರತಾ ಪಡೆಗಳು ಟ್ರಕ್ ಅನ್ನು ಶೋಧಿಸಲು ಆರಂಭಿಸಿದಾಗ ಒಳಗೆ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಎಲ್ಲಾ ಭಯೋತ್ಪಾದಕರು ಕೊಲ್ಲಲ್ಪಟ್ಟರು" ಎಂದು ಜಮ್ಮು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಮುಕೇಶ್ ಸಿಂಗ್ ಹೇಳಿದರು.
ಟ್ರಕ್ ಚಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಹಾಗೂ ಆತನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಂಗ್ ಹೇಳಿದರು.
ಎನ್‌ಕೌಂಟರ್ ನಂತರ ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದ್ದು,ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಬೆಳಗ್ಗೆ 7 ಗಂಟೆ ಸುಮಾರಿಗೆ ಎನ್‌ಕೌಂಟರ್ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.





