ಶೀಘ್ರವೇ ವಿಶ್ವ ಕನ್ನಡ ಸಮ್ಮೇಳನ: ಸಿಎಂ ಬೊಮ್ಮಾಯಿ

ಬೆಳಗಾವಿ, ಡಿ. 28: 'ಈ ಹಿಂದೆ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಶೀಘ್ರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ಬೆಳಗಾವಿ ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಕನ್ನಡ ಭವನ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಪ್ರಾಮಾಣಿಕತೆ ಇದೆ. ಕನ್ನಡದ ಸಾಕ್ಷಿಪ್ರಜ್ಞೆ ಮಾನವೀಯತೆಯಿಂದ ಕೂಡಿರುವಂಥದ್ದು. ಕನ್ನಡದ ಪುರಂದರದಾಸರು, ಅಲ್ಲಮಪ್ರಭು, ಬಸವಣ್ಣ, ಅವರಿಂದ ಹರಿದುಬರುವ ಜ್ಞಾನದ ಭಂಡಾರ ಕನ್ನಡಿಗರನ್ನು ಬೆಳೆದಿದೆ. ಹಿಂದಿನವರು ಇದನ್ನು ನಮಗೆ ಕೊಟ್ಟಿದ್ದಾರೆ. ನಮ್ಮ ಕರ್ತವ್ಯ ಇದನ್ನು ಇನ್ನಷ್ಟು ಉತ್ಕೃಷ್ಟಗೊಳಿಸಿ ಬಿಟ್ಟುಕೊಡಬೇಕು. ಅದ್ಭುತ ರಂಗಮಂದಿರವನ್ನು ನಿರ್ಮಿಸಲಾಗಿದೆ ಎಂದರು.
ಗಡಿ ಭಾಗದ ಅಭಿವೃದ್ಧಿ: ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100ಕೋಟಿ ರೂ. ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ ಎಂದರು.
ಸ್ವರ್ಗದ ದರ್ಶನ: ಗಡಿಯಾಚೆ ಇತ್ಯರ್ಥವಾದ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ರಾಜಕೀಯವಾಗಿ ಗಡಿಯಾಚೆ ಸಮಸ್ಯೆ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಯಾವತ್ತೂ ಹಾಗೆ ಮಾಡಿಲ್ಲ. ಕನ್ನಡಕ್ಕೆ ಗಟ್ಟಿಯಾಗಿ ಎದ್ದು ನಿಲುವುದು ಕನ್ನಡಿಗರಿಗೆ ರಕ್ಷಣೆ ಸದಾ ಕಾಲ ಮಾಡಿಕೊಂಡು ಬಂದಿದ್ದೇವೆ ಎಂದರು.
ಕನ್ನಡಕ್ಕೆ ಅಂತರ್ಗತ ಶಕ್ತಿ: ಕನ್ನಡ ದಿನನಿತ್ಯ ಬಳಕೆ ಮಾಡಿದರೆ ಉಳಿಯುತ್ತದೆ. ಕನ್ನಡಕ್ಕೆ ಅಂತರ್ಗತ ಶಕ್ತಿ ಇದೆ. ಕನ್ನಡವನ್ನು ಅಳಿಸಲು ಸಾಧ್ಯವಿಲ್ಲ. ಶಕ್ತಿ ಶಾಲಿ ಭಾಷೆ ಕನ್ನಡ. ಹಿನ್ನಡೆಯಾದರೆ ಅದು ನಮ್ಮಿಂದಾಗಬೇಕು, ಕನ್ನಡ ಭಾಷೆಯ ಶಕ್ತಿ ಬಳಕೆ ಮಾಡಿದರೆ ಕನ್ನಡವೂ ಬೆಳೆದು ನಾವೂ ಬೆಳೆಯುತ್ತೇವೆ. ಕನ್ನಡ ಭಾಷೆಗೆ ಆತಂಕವಿಲ್ಲ ಎಂದರು.







