ಉಡುಪಿ: ಶಾಲಾ ಜಗಲಿಯಲ್ಲೇ ಕುಡಿದು ಮಲಗಿದ ಶಿಕ್ಷಕ!: ವೀಡಿಯೋ ವೈರಲ್
ಸತ್ಯಾಸತ್ಯತೆ ಪರಿಶೀಲಿಸಲು ಬಿಇಓಗೆ ಡಿಡಿಪಿಐ ಸೂಚನೆ

ಉಡುಪಿ, ಡಿ.28: ಶಾಲಾ ಶಿಕ್ಷಕನೋರ್ವ ಕಂಠಪೂರ್ತಿ ಮದ್ಯಪಾನ ಮಾಡಿ ಶಾಲೆಯ ಜಗಲಿಯಲ್ಲೇ ಮಲಗಿದ್ದನೆನ್ನಲಾದ ಘಟನೆ ಪೆರ್ಡೂರು ಗ್ರಾಮದ ಅಲಂಗಾರು ಎಂಬಲ್ಲಿ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೆರ್ಡೂರು ಗ್ರಾಮದ ಅಲಂಗಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣಮೂರ್ತಿ ಆರೋಪಿ. ಇವರು ಇತ್ತೀಚೆಗೆ ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆಯೇ ಕಂಠಪೂರ್ತಿ ಕುಡಿದು ಜಗಲಿಯಲ್ಲಿ ಮಲಗಿದ್ದರೆನ್ನಲಾಗಿದ್ದು, ಇದನ್ನು ಯಾರೋ ವೀಡಿಯೋ ಮಾಡಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಕ್ಷಕ ಕೃಷ್ಣಮೂರ್ತಿ ಜಗಲಿಯಲ್ಲಿ ಮಲಗಿರುವ ಸ್ಥಿತಿಯಲ್ಲಿದ್ದರೆ, ಅಲ್ಲೇ ಪಕ್ಕದ ತರಗತಿಯೊಳಗೆ ಪುಟಾಣಿ ಮಕ್ಕಳು ವೀಡಿಯೊದಲ್ಲಿ ಕಂಡುಬಂದಿದ್ದಾರೆ.
ಅಮಾನತಿಗೆ ಒತ್ತಾಯ:
ಗ್ರಾಮದ ಶಾಲೆಯ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ ನೇತೃತ್ವದ ನಿಯೋಗವು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದೆ.
ನಿಯೋಗದಲ್ಲಿ ಗ್ರಾಪಂ ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಸದಸ್ಯ ಕೆ.ತುಕಾರಾಮ ನಾಯಕ್, ಶಾಲಾಭಿವೃದ್ಧಿ ಸಮಿತಿಯ ರಮೇಶ್ ಪೂಜಾರಿ, ಬೈದಷ್ರಿ ಫ್ರೆಂಡ್ಸ್ ನ ಸತೀಶ್ (ಅಣ್ಣು), ಗ್ರಾಮಸ್ಥರು ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಪರಿಶೀಲಿಸಿ ಕ್ರಮ: ಡಿಡಿಪಿಐ
ಶಿಕ್ಷಕನ ಕೃತ್ಯ ತನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಬ್ರಹ್ಮಾವರ ಬಿಇಓಗೆ ಸೂಚನೆ ನೀಡಿದ್ದೇನೆ. ವರದಿ ಕೈಸೇರಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಡಿಡಿಪಿಐ ಗಣಪತಿ ಕೆ. ತಿಳಿಸಿದ್ದಾರೆ.
ಶಿಕ್ಷಕ ಕೃಷ್ಣಮೂರ್ತಿ ವಿರುದ್ಧ ಈ ಮೊದಲು ಇಂಥ ದೂರುಗಳಿದ್ದವೇ ಎಂಬ ಬಗ್ಗೆ ತನಗೆ ಮಾಹಿತಿ ಇಲ್ಲ. ತಾನು ಅಧಿಕಾರ ಸ್ವೀಕರಿಸಿ ವಾರವಷ್ಟೇ ಆಗಿದೆ ಎಂದು ಡಿಡಿಪಿಐ ಹೇಳಿದ್ದಾರೆ.
