ಕುದ್ಕೋಳಿ ದಲಿತ ಕುಂಟುಂಬಗಳ ಬೇಡಿಕೆ ಈಡೇರಿಕೆಗೆ ಆಗ್ರಹ: ಜ.2ರಂದು ಪುತ್ತೂರು ತಾಲೂಕು ಕಚೇರಿಯೆದುರು ಧರಣಿ
ಪುತ್ತೂರು, ಡಿ.28: ತಾಲೂಕಿನ ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ಎಂಬಲ್ಲಿರುವ 4 ದಲಿತ ಕುಟುಂಬಗಳ ಮನೆಗಳನ್ನು ಸಂಪರ್ಕಿಸುವ ರಸ್ತೆ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಜ.2ರಂದು ಪುತ್ತೂರು ತಾಲೂಕು ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸುಂದರ ಪಾಟಾಜೆ ತಿಳಿಸಿದ್ದಾರೆ.
ಅವರು ಬುಧವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುದ್ಕೋಳಿಯಲ್ಲಿ ಸುಮಾರು 27 ಸೆಂಟ್ಸ್ ಸರಕಾರಿ ಜಾಗವನ್ನು ಅಕ್ರಮ-ಸಕ್ರಮ ಯೋಜನೆಯಡಿ ಜಯಲತಾ ರೈ ಎಂಬವರಿಗೆ ಮಂಜೂರುಗೊಳಿಸಲಾಗಿದೆ. ಆದರೆ ಈ ಜಾಗದ ಮೂಲಕವೇ ದಲಿತ ಕುಟುಂಬಕ್ಕೆ ಸೇರಿದ ಪರಮೇಶ್ವರ ಮತ್ತು ಇತರ ನಾಲ್ಕು ಕುಟುಂಬಗಳ ಮನೆಗಳಿಗೆ ಹೋಗುವ ರಸ್ತೆ ಇದೆ. ಇದೀಗ ಜಯಲತಾ ರೈ ಈ ರಸ್ತೆಯನ್ನು ಮುಚ್ಚಲು ಮುಂದಾಗಿದ್ದಲ್ಲದೆ, ಸರಕಾರಿ ಜಾಗದಲ್ಲಿ ಅವರು ಮನೆ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದರೂ ಈ ತನಕ ಕ್ರಮ ಕೈಗೊಂಡಿಲ್ಲ. ದಲಿತ ಕುಟುಂಬಗಳಿಗೆ ಮನೆಗೆ ತೆರಳಲು ಬಳಸುತ್ತಿರುವ ಇಲ್ಲಿರುವ ಈ ರಸ್ತೆಯನ್ನು ದಲಿತ ಕುಟುಂಬಗಳಿಗೆ ಬಿಟ್ಟು ಕೊಡಬೇಕು. ಈ ಅಕ್ರಮ ಸಕ್ರಮ ಮಂಜೂರಾತಿಯನ್ನು ರದ್ದುಪಡಿಸಬೇಕು ಮತ್ತು ಜಯಲತಾ ರೈಯವರು ಪರಮೇಶ್ವರ ಅವರ ಅಡಿಕೆ ಕೃಷಿಗೆ ಹಾನಿ ಮಾಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಯಲತಾ ರೈ ಅವರಿಗೆ ಮಾಡಲಾಗಿರುವ ಅಕ್ರಮ ಸಕ್ರಮ ರೆಕಾರ್ಡನ್ನು ರದ್ದುಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ, ಸಹಾಯಕ ಆಯಕ್ತರು ಮತ್ತು ತಹಶೀಲ್ದಾರ್‌ಗೆ ಎಸ್‌ಸಿ-ಎಸ್‌ಟಿ ಆಯೋಗ, ಸಿವಿಲ್ ನ್ಯಾಯಾಲಯದಿಂದ ಸೂಚನೆ ನೀಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.





