ಯು.ಟಿ. ಖಾದರ್ ನೇತೃತ್ವದಲ್ಲಿ ದ.ಕ ಜಿಲ್ಲಾ ಮುಸ್ಲಿಮ್ ಮುಖಂಡರ ನಿಯೋಗದಿಂದ ಗೃಹ ಸಚಿವರ ಭೇಟಿ
ಬೆಳಗಾವಿ, ಡಿ. 28: ವಿಧಾನ ಸಭೆ ವಿಪಕ್ಷ ಉಪ ನಾಯಕ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಮುಖಂಡರ ನಿಯೋಗವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿತು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗೃಹ ಸಚಿವರನ್ನು ಭೇಟಿಯಾದ ನಿಯೋಗವು, ಇತ್ತೀಚೆಗೆ ಮಂಗಳೂರಿನ ಕಾಟಿಪಳ್ಳದಲ್ಲಿ ಹತ್ಯೆಯಾದ ಜಲೀಲ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಎಲ್ಲಾ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ಮೂಡ ಅಧ್ಯಕ್ಷರಾದ ಕೋಡಿಜಾಲ್ ಇಬ್ರಾಹಿಂ, ಮಾಜಿ ಮೇಯರ್ ಹಾಗೂ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ. ಅಶ್ರಫ್ , ಉಪಾಧ್ಯಕ್ಷ ಅದ್ದು ಕೃಷ್ಣಾಪುರ, ಕಾರ್ಯದರ್ಶಿ ಸಿ. ಎಮ್. ಮುಸ್ತಫ ಇತರರು ಉಪಸ್ಥಿತರಿದ್ದರು.