ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳಿಂದ ನನ್ನ ಪೋಷಕರಿಗೆ ಕಿರುಕುಳ: ನಟ ಸಿದ್ಧಾರ್ಥ್ ಆರೋಪ

ಹೊಸದಿಲ್ಲಿ: ಮಧುರೈನ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ನನ್ನ ಪೋಷಕರಿಗೆ ಕಿರುಕುಳ ನೀಡಿದ್ದಾರೆ ಎಂದು ತಮಿಳು ನಟ ಸಿದ್ಧಾರ್ಥ್ (Siddharth) ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ನಟ ಸಿದ್ಧಾರ್ಥ್ ಈ ಕುರಿತು ಪೋಸ್ಟ್ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಪೋಸ್ಟ್‌ನಲ್ಲಿ ಅವರು, ವಿಮಾನ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗಳು ನನ್ನ ಪೋಷಕರ ಚೀಲದಲ್ಲಿದ್ದ ನಾಣ್ಯಗಳನ್ನು ಹೊರ ತೆಗೆಯಲು ಹೇಳಿದರು ಮತ್ತು ಹಲವು ಬಾರಿ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಮನವಿ ಮಾಡಿದರೂ ಆ ಮನವಿಯನ್ನು ತಿರಸ್ಕರಿಸಿ, ಪದೇ ಪದೇ ಹಿಂದಿಯಲ್ಲಿ ಮಾತನಾಡುವ ಮೂಲಕ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
"ನನ್ನ ಪೋಷಕರು ಭದ್ರತಾ ಸಿಬ್ಬಂದಿಗಳ ನಡವಳಿಕೆಯನ್ನು ಪ್ರತಿಭಟಿಸಿದಾಗ, ಭಾರತದಲ್ಲಿ ಹೀಗೆಯೇ ಇರುತ್ತದೆ ಎಂದಿದ್ದಾರೆ" ಎಂದು ಅವರು ಪೋಸ್ಟ್ ಮಾಡಿದ್ದರು.
"ಮಧುರೈ ವಿಮಾನ ನಿಲ್ದಾಣದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಅವರಿಗೆ ಇಪ್ಪತ್ತು ನಿಮಿಷಗಳ ಕಾಲ ಕಿರುಕುಳ ನೀಡಿದ್ದಾರೆ. ಅವರ ಚೀಲದಿಂದ ನಾಣ್ಯಗಳನ್ನು ಹೊರ ತೆಗೆಯಲು ಸೂಚಿಸಿದ್ದಾರೆ! ಹಲವು ಬಾರಿ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಮನವಿ ಮಾಡಿದರೂ ಪದೇ ಪದೇ ಹಿಂದಿಯಲ್ಲಿ ಮಾತನಾಡಿದ್ದಾರೆ" ಎಂದು ಅವರು ತಮ್ಮ ಪೋಷಕರ ಅನುಭವವನ್ನು ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ 20 ವರ್ಷಗಳ ಸಿನಿಮಾ ಪಯಣದಲ್ಲಿ ನಟ ಸಿದ್ಧಾರ್ಥ್ ಹಲವಾರು ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.








