ಸಮ್ಮೇದ ಶಿಖರ್ಜಿ ಪ್ರವಾಸಿ ತಾಣವಾಗಿಸುವುದಕ್ಕೆ ವಿರೋಧ: ಮೂಡುಬಿದಿರೆಯಲ್ಲಿ ಜೈನರಿಂದ ಮೌನ ಪ್ರತಿಭಟನೆ

ಮೂಡುಬಿದಿರೆ, ಡಿ.28: ಜೈನ ಧರ್ಮೀಯರ ಪವಿತ್ರ ಕ್ಷೇತ್ರ ಜಾರ್ಖಂಡ್‌ನ ಶ್ರೀ ಸಮ್ಮೇದ ಶಿಖರ್ಜಿ ಪ್ರದೇಶವನ್ನು ಅಲ್ಲಿನ ಸರಕಾರ ಪ್ರವಾಸಿ ತಾಣವನ್ನಾಗಿ ಮಾಡಲು ಹೊರಡಿಸಿದ ಆದೇಶದ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲೆಯ ಜೈನ ಸಮಾಜದವರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಜಾಥಾ ಹಮ್ಮಿಕೊಂಡಿದ್ದರು.
ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸಾವಿರ ಕಂಬ ಬಸದಿ ಆವರಣದಿಂದ ಮುಖ್ಯರಸ್ತೆಯ ಮೂಲಕ ಆಡಳಿತ ಸೌಧದವರೆಗೆ ದ.ಕ, ಉಡುಪಿ ಜಿಲ್ಲೆಯ ಸಾವಿರಾರು ಜೈನ ಸಮಾಜದವರು ಮೌನ ಪ್ರತಿಭಟನಾ ಜಾಥಾ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಮ್ಮೇದ ಶಿಖರ್ಜಿ ಜೈನರ ಪವಿತ್ರ ಕ್ಷೇತ್ರವಾಗಿದ್ದು, 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಇಲ್ಲಿ ತಪಸ್ಸು ಮಾಡಿ ಸಿದ್ಧಿ ಪ್ರಾಪ್ತಿ ಹೊಂದಿದ ಪುಣ್ಯ ಭೂಮಿ. ನಿತ್ಯ ಸಾವಿರಾರು ಜೈನರು ಶ್ರದ್ಧಾ ಭಕ್ತಿಯಿಂದ ಕ್ಷೇತ್ರದ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ಇಂತಹ ಪವಿತ್ರ ಕ್ಷೇತ್ರವನ್ನು ಜಾರ್ಖಂಡ್ ಸರಕಾರ ಪ್ರವಾಸಿ ತಾಣವಾಗಿಸಲು ತೀರ್ಮಾನ ಕೈಗೊಂಡಿರುವುದು ಅಲ್ಪ ಸಂಖ್ಯಾತ ಜೈನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದಂತಾಗಿದೆ. ದಬ್ಬಾಳಿಕೆಯನ್ನು ನಿಲ್ಲಿಸಿ ಪುಣ್ಯಭೂಮಿಯ ಪಾವಿತ್ರ್ಯತೆಯನ್ನು ರಕ್ಷಿಸಬೇಕು. ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಜಾರ್ಖಂಡ ಮುಖ್ಯಮಂತ್ರಿ, ರಾಷ್ಟ್ರಪತಿ, ಪ್ರಧಾನ ಮಂತ್ರಿಯವರನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ, ಚೌಟರ ಅರಮನೆಯ ಕುಲದೀಪ್ ಎಂ., ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಜೈನ್ ಮಿಲನ್ ವಲಯ ಅಧ್ಯಕ್ಷ ಪುಷ್ಪರಾಜ್ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ್, ಜೈನ ಸಮಾಜದ ಪ್ರಮುಖರಾದ ಕೆ.ಪಿ ಜಗದೀಶ್ ಅಧಿಕಾರಿ, ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಅಭಿಜಿತ್ ಎಂ, ಡಾ.ಮಹಾವೀರ ಜೈನ್, ನಮಿರಾಜ್, ಧನಕೀರ್ತಿ ಬಲಿಪ, ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಯತಿರಾಜ್ ಜೈನ್ ಮತ್ತಿತರರು ಭಾಗವಹಿಸಿದ್ದರು.
ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಶೈಲೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಪದ್ಮಪ್ರಸಾದ್ ಜೈನ್ ಮನವಿ ಪತ್ರ ವಾಚಿಸಿದರು. ಪ್ರವೀಣ್‌ಚಂದ್ರ ಜೈನ್ ವಂದಿಸಿದರು.