ಕೃಷ್ಣಾಪುರ ಜಲೀಲ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರಿಂದ ಭರವಸೆ: ಯು.ಟಿ.ಖಾದರ್

ಬೆಳಗಾವಿ, ಡಿ.28: ಇತ್ತೀಚೆಗೆ ಮಂಗಳೂರಿನ ಕೃಷ್ಣಾಪುರ ಸಮೀಪ ಹತ್ಯೆಯಾದ ಜಲೀಲ್ ಅವರ ಕುಟಂಬಕ್ಕೆ ಪರಿಹಾರ ನೀಡುವ ಬಗ್ಗೆ ದ.ಕ. ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವರದಿ ಅಧರಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿ ಆರಗ ಜ್ಞಾನೇಂದ್ರ ಅವರು ಭರವಸೆ ನೀಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಯುಟಿ ಖಾದರ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಮತ್ತು ರಾಜ್ಯ ಗೃಹಸಚಿವರನ್ನು ಭೇಟಿ ಮಾಡಿ, ಜಿಲ್ಲೆಯ ಕೋಮುದ್ವೇಷ, ಅನೈತಿಕ ಪೊಲೀಸ್‌ಗಿರಿ ಕುರಿತಾಗಿ ವಿಸ್ತೃತವಾಗಿ ಚರ್ಚಿಸಿತಲ್ಲದೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿತು. ಅಲ್ಲದೆ, ಸರಕಾರದ ಪರಿಹಾರ ಧನ ಘೋಷಿಸಬೇಕು ಎಂದು ಮನವಿ ಮಾಡಿತು.
'ಜಲೀಲ್ ಹತ್ಯೆ ಯಾವ ಕಾರಣಕ್ಕಾಗಿ ನಡೆಯಿತು ಎಂಬುದರ ಬಗ್ಗೆ ದ.ಕ.ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ವರದಿ ನೀಡಲು ಸೂಚಿಸಿದ್ದೇವೆ. ವರದಿಯ ಬಳಿಕ ಪರಿಹಾರದ ಬಗ್ಗೆ ನಿರ್ಧರಿಸಲಾಗುವುದು' ಎಂದು ಮುಖ್ಯಮಂತ್ರಿ ಮತ್ತು ಗೃಹಸಚಿವರು ತಿಳಿಸಿರುವುದಾಗಿ ಯುಟಿ ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: ಯು.ಟಿ. ಖಾದರ್ ನೇತೃತ್ವದಲ್ಲಿ ದ.ಕ ಜಿಲ್ಲಾ ಮುಸ್ಲಿಮ್ ಮುಖಂಡರ ನಿಯೋಗದಿಂದ ಗೃಹ ಸಚಿವರ ಭೇಟಿ










