ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೊಂಡಿರುವಂತೆ ನರೇಗಾ ಉದ್ಯೋಗಗಳಿಗೆ ಬೇಡಿಕೆ ಕಡಿಮೆಯಾಗಿದೆಯೇ ?
ಸತ್ಯಾಂಶ ಇಲ್ಲಿದೆ

ಹೊಸದಿಲ್ಲಿ, ಡಿ.28: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿ.14ರಂದು ಲೋಕಸಭೆಯಲ್ಲಿ ಮಾತನಾಡಿದ ಸಂದರ್ಭ,ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳಿಗೆ ಬೇಡಿಕೆ ತಗ್ಗುತ್ತಿದೆ,ಇತ್ತೀಚಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯಡಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಆದರೆ ವಾಸ್ತವ ಸ್ಥಿತಿ ಸಚಿವೆಯ ಹೇಳಿಕೆಗಿಂತ ತುಂಬ ಭಿನ್ನವಾಗಿದೆ ಎನ್ನುವುದನ್ನು ಸತ್ಯಶೋಧನಾ ಜಾಲತಾಣ Factchecker.in ಬಹಿರಂಗಗೊಳಿಸಿದೆ.
ಉದ್ಯೋಗಗಳಿಗೆ ಬೇಡಿಕೆ ಕುಸಿತದ ನಿಖರ ಸಮಯವನ್ನು ಸೀತಾರಾಮನ್ ಉಲ್ಲೇಖಿಸಿರಲಿಲ್ಲ. 2021-21ರಲ್ಲಿ 8.55 ಕೋಟಿ ಕುಟುಂಬಗಳಿಂದ ಉದ್ಯೋಗಗಳಿಗೆ ಬೇಡಿಕೆಯಿದ್ದರೆ 2021-22ರಲ್ಲಿ ಅದು ಶೇ.5.8ರಷ್ಟು,ಅಂದರೆ 8.05 ಕೋಟಿ ಕುಟುಂಬಗಳಿಗೆ ಇಳಿಕೆಯಾಗಿತ್ತು. ಈ ಪ್ರವೃತ್ತಿ 2022-23ರಲ್ಲಿಯೂ ಮುಂದುವರಿದಿದ್ದು, ಡಿಸೆಂಬರ್ 22ರವರೆಗೆ 6.24 ಕೋಟಿ ಕುಟುಂಬಗಳಿಂದ ಉದ್ಯೋಗಗಳಿಗೆ ಬೇಡಿಕೆಯಿತ್ತು. ಇದು ಹಿಂದಿನ ಎರಡು ವರ್ಷಗಳಲ್ಲಿಯ ಇದೇ ಅವಧಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿದೆ.
ಆದರೆ ಈಗಲೂ ಬೇಡಿಕೆಯು 2019-20ರಲ್ಲಿ ಕೋವಿಡ್ ಸಾಂಕ್ರಾಮಿಕದ ಮತ್ತು ಸಂಬಂಧಿತ ಲಾಕ್ಡೌನ್ ಗಳಿಂದಾಗಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳುವ ಮುನ್ನ ಉದ್ಯೋಗಗಳಿಗೆ ಇದ್ದ ಬೇಡಿಕೆಗಿಂತ ಅಧಿಕವಾಗಿಯೇ ಇದೆ. ಸೀತಾರಾಮನ್ ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು Factchecker.in ಮಾರ್ಚ್ 2018 ಮತ್ತು ಡಿ.22, 2022ರ ನಡುವೆ ಯೋಜನೆಯಡಿ ಉದ್ಯೋಗಗಳಿಗೆ ಬೇಡಿಕೆಯ ಕುರಿತು ನರೇಗಾ ವೆಬ್ಸೈಟ್ ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ವಿಶ್ಲೇಷಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಕ್ಕೆ ಬೇಡಿಕೆ ಸ್ಥಿರವಾಗಿ ಏರಿಕೆಯಾಗಿದೆ. 2018-19ರಲ್ಲಿ 5.78 ಕೋ.ಕುಟುಂಬಗಳಿಂದ (9.11 ಕೋ.ಜನರು) ಕೆಲಸಕ್ಕಿದ್ದ ಬೇಡಿಕೆಯು 2019-20ರಲ್ಲಿ 6.16 ಕೋ.ಕುಟುಂಬಗಳಿಗೆ (9.33 ಕೋ.ಜನರು) ಏರಿಕೆಯಾಗಿದೆ.
2020ರಲ್ಲಿ ಕೋವಿಡ್ ಬಿಕ್ಕಟ್ಟಿನಿಂದಾಗಿ ಉದ್ಯೋಗಗಳಿಗೆ ಬೇಡಿಕೆಯು ಇನ್ನಷ್ಟು ಹೆಚ್ಚಾಗಿತ್ತು. ಮಾರ್ಚ್ 2020ರಲ್ಲಿ ಲಾಕ್ಡೌನ್ ಘೋಷಣೆಯಾದಾಗ ನಗರ ಪ್ರದೇಶಗಳಲ್ಲಿ ಕೆಲಸವಿಲ್ಲದೆ ಅಸಹಾಯಕರಾಗಿದ್ದ ಸುಮಾರು 1.14 ಕೋ.ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳಿದ್ದರು. 2020-21ರಲ್ಲಿ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನರೇಗಾದಡಿ ಕೆಲಸಕ್ಕೆ ಬೇಡಿಕೆ ಶೇ.38.7ರಷ್ಟು ಏರಿಕೆಯಾಗಿತ್ತು. 2018-19ರ ಶೇ.8.6 ಮತ್ತು 2019-20ರ ಶೇ.2.4ರಷ್ಟು ಏರಿಕೆಗೆ ಹೋಲಿಸಿದರೆ ಆ ವರ್ಷ ಕೆಲಸಕ್ಕಾಗಿ ಬೇಡಿಕೆಯಿಟ್ಟಿದ್ದ ವ್ಯಕ್ತಿಗಳ ಸಂಖ್ಯೆಯು 2019-20ಕ್ಕಿಂತ ಶೇ.42.7ರಷ್ಟು ಹೆಚ್ಚಳವಾಗಿತ್ತು.
2021-22ರಲ್ಲಿ ಎರಡನೇ ಅಲೆಯ ಬಳಿಕ ಆರ್ಥಿಕ ಚಟುವಟಿಕೆಗಳು ಕ್ರಮೇಣ ಪುನರಾರಂಭಗೊಂಡಿದ್ದಾಗ 2020-21ಕ್ಕೆ ಹೋಲಿಸಿದರೆ ಸುಮಾರು ಶೇ.5.8ರಷ್ಟು ಕಡಿಮೆ ಕುಟುಂಬಗಳು ನರೇಗಾದಡಿ ಕೆಲಸಕ್ಕೆ ಬೇಡಿಕೆಯನ್ನು ಹೊಂದಿದ್ದವು.
ಕೋವಿಡ್ ಬಿಕ್ಕಟ್ಟಿನಿಂದಾಗಿ 2019-20 ಮತ್ತು 2020-21ರ ನಡುವಿನ ಅವಧಿಯನ್ನು ಸಾಮಾನ್ಯಕ್ಕಿಂತ ಭಿನ್ನ ವರ್ಷಗಳನ್ನಾಗಿ ಪರಿಗಣಿಸಿಬಹುದು. ಆದಾಗ್ಯೂ ಸಾಂಕ್ರಾಮಿಕದ ಮೊದಲಿನ ಮತ್ತು ಡಿಸೆಂಬರ್ 22ರವರೆಗಿನ ದತ್ತಾಂಶಗಳನ್ನು ಮಾತ್ರ ಪರಿಶೀಲಿಸಿದರೂ ಕುಟುಂಬಗಳಿಂದ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಿರುವುದು ಸ್ಪಷ್ಟವಾಗಿದೆ. ಅದು 2019-20ರಲ್ಲಿದ್ದ 6.16 ಕೋ.ಯಿಂದ ಡಿ.22ಕ್ಕೆ ಇದ್ದಂತೆ 6.24 ಕೋ.ಗೆ ಏರಿಕೆಯಾಗಿದೆ. ಪ್ರಸ್ತುತ ವಿತ್ತವರ್ಷ ಕೊನೆಗೊಳ್ಳಲು ಕೇವಲ ಮೂರು ತಿಂಗಳುಗಳು ಬಾಕಿಯಿದ್ದು,ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಪೀಪಲ್ಸ್ ಆ್ಯಕ್ಶನ್ ಫಾರ್ ಎಂಪ್ಲಾಯ್ಮೆಂಟ್ ಗ್ಯಾರಂಟಿಯಲ್ಲಿ ಸಂಶೋಧಕರಾಗಿರುವ ವಿಜಯ ರಾಮ ಎಸ್.ಬೆಟ್ಟು ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು ಡಿ.13ರಂದು ಲೋಕಸಭೆಯಲ್ಲಿ ನೀಡಿದ ಉತ್ತರದಂತೆ ದೇಶಾದ್ಯಂತ ನರೇಗಾ ಕಾರ್ಮಿಕರು ಸುಮಾರು 4,447.92 ಕೋ.ರೂ.ಗಳ ಬಾಕಿ ವೇತನ ಪಾವತಿಗಾಗಿ ಕಾಯುತ್ತಿದ್ದಾರೆ.
ಕೃಪೆ: Factchecker.in







