ಕವಯತ್ರಿ ಗೇರಸೊಪ್ಪೆಗೆ ಇಂದು ಕವಿತಾ ಪುರಸ್ಕಾರ

ಮಂಗಳೂರು: ಕವಿತಾ ಟ್ರಸ್ಟ್ ವತಿಯಿಂದ ಕೊಡಲ್ಪಡುವ 2022ನೇ ಸಾಲಿನ ಮಥಾಯಸ್ ಕುಟುಂಬದ ಕವಿತಾ ಪುರಸ್ಕಾರವು ಬೆಂಗಳೂರಿನ ‘ಇಂದು ಗೇರಸೊಪ್ಪೆ’ ಅವರಿಗೆ ದೊರೆತಿದೆ.
25,000 ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುವ ಈ ಪುರಸ್ಕಾರವು ಜ.8ರಂದು ಕಾಸರಗೋಡಿನ ಬೇಳದಲ್ಲಿ ನಡೆಯಲಿರುವ ಹದಿನೇಳನೇ ಕವಿತಾ ಫೆಸ್ತ್ ಸಂಭ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಚಿತ್ರಾಪುರ ಸಾರಸ್ವತ ಕುಟುಂಬದಲ್ಲಿ 1941ರಲ್ಲಿ ಮಂಗಳೂರಿನಲ್ಲಿ ಜನಿಸಿದ ಇಂದು ಗೇರಸೊಪ್ಪೆ ಗೋವೆಯ ಮಡಗಾಂವಿನಲ್ಲಿ ಬೆಳೆದರು. ನಂತರ ಪಂಚಗಣಿ ಮತ್ತು ಮುಂಬೈನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದರು. ಬಳಿಕ ಮುಂಬೈಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದರು. ಇಂದು ಗೇರಸೊಪ್ಪೆ ಕೊಂಕಣಿಯಲ್ಲದೆ ಇಂಗ್ಲಿಷ್ ನಲ್ಲಿಯೂ ಕವಿತೆಗಳನ್ನು ಬರೆದಿದ್ದಾರೆ.
ಗೋವಾ ಕೊಂಕಣಿ ಅಕಾಡಮಿಯ ಪ್ರಶಸ್ತಿಗೆ ಭಾಜನವಾಗಿದೆ. ಮೆರಿಟ್ ಫ್ರೈಟ್ ಸಿಸ್ಟಮ್ಸ್ ದುಬಾಯ್ ಇದರ ಆಡಳಿತ ನಿರ್ದೇಶಕ ಜೋಸೆಫೆ ಮಥಾಯಸ್ ಕುಪ್ಪೆಪದವಿನಲ್ಲಿರುವ ತಮ್ಮ ಕುಟುಂಬದ ಹೆಸರಿನಲ್ಲಿ ಸ್ಥಾಪನೆ ಮಾಡಿದ ಈ ಕವಿತಾ ಟ್ರಸ್ಟ್ ಪುರಸ್ಕಾರವು ಕಳೆದ 14 ವರ್ಷಗಳಲ್ಲಿ ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರದ 14 ಕೊಂಕಣಿ ಕವಿಗಳಿಗೆ ಲಭಿಸಿದೆ.