ಪುತ್ತೂರಿನಲ್ಲಿ ಅಪರಾಧ ತಡೆ ಮಾಸಾಚರಣೆ: ಪೊಲೀಸರ ಬಗ್ಗೆ ಭಯ ಬೇಡ: ಸುನಿಲ್ ಕುಮಾರ್

ಪುತ್ತೂರು: ಪೊಲೀಸರನ್ನು ಕಂಡರೆ ಭಯ ಪಡುವ ಅಗತ್ಯವಿಲ್ಲ. ಕೇವಲ ಪೊಲೀಸರಿಂದ ಅಪರಾಧ ಪತ್ತೆ ಹಚ್ಚಿ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಯಾವುದೇ ಅಪರಾಧ ಪ್ರಕರಣಗಳು ಗಮನಕ್ಕೆ ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಸುನಿಲ್ ಕುಮಾರ್ ತಿಳಿಸಿದರು.
ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಡಿಸೆಂಬರ್ ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಯುತ್ತಿದ್ದು, ಬುಧವಾರ ದ.ಕ.ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಇದರ ಆಶ್ರಯದಲ್ಲಿ ಪುತ್ತೂರಿನ ರೋಟರಿ ಕ್ಲಬ್ ಯುವ, ಇಂಟರ್ಯಾಕ್ಟ್ ಕ್ಲಬ್ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಯೋಗದಲ್ಲಿ ನಗರದ ಕೊಂಬೆಟ್ಟಿನಿಂದ ಪುತ್ತೂರು ಗಾಂಧಿಕಟ್ಟೆಯ ತನಕ ಜಾಗೃತಿ ಜಾಥಾವು ನಡೆಯಿತು.
ಜಾಥಾದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ, ಸುನಿಲ್ ಕುಮಾರ್ ಅವರು ಅಪರಾಧ ತಡೆಯುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿದರೆ ಅವರ ಮನೆಮಂದಿಗೆ ತಲುಪುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸರಿಯಾಗಿ ತಿಳಿದು ಕೊಳ್ಳಬೇಕು ಎಂದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಮಾತನಾಡಿ, ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಪೊಲೀಸ್ ಇಲಾಖೆಯಿಂದ ಹಲವಾರು ಸೇವೆಗಳಿವೆ. ಆದರೆ ಅವನ್ನು ಬಳಕೆ ಮಾಡುವುದರಲ್ಲಿ ಇನ್ನೂ ಸಾರ್ವಜನಿಕರು ಹಿನ್ನಡೆಯಲ್ಲಿದ್ದಾರೆ. ನಮ್ಮಲ್ಲಿ `112' ತುರ್ತು ವಾಹನ ಇದೆ. ಅದಕ್ಕೆ ಕರೆ ಮಾಡಿದರೆ ಕ್ಷಣದಲ್ಲೇ ಅದರಿಂದ ಸೇವೆ ಸಿಗುತ್ತದೆ. ನಿಮ್ಮ ಮೊಬೈಲ್‍ನಿಂದ ತುರ್ತು ಕರೆಯ ನಂಬರ್ ಗೊತ್ತಿಲ್ಲದಿದ್ದರೂ ಮೊಬೈಲ್ ಪೋನ್ ನಲ್ಲಿರುವ ಪವರ್ ಬಟನನ್ನು ಮೂರು ಬಾರಿ ಪ್ರೆಸ್ ಮಾಡಿ. ಆಗ ಕರೆ ನೇರ 112ಗೆ ಹೋಗುತ್ತದೆ. ಪೊಲೀಸ್ ಇಲಾಖೆಯ ಸೇವೆಗಳ ಕುರಿತು ಎಲ್ಲರೂ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರು ಮಾತನಾಡಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆಯಾಗುತ್ತದೆ. ಸಂಚಾರ ನಿಮಯ ಪಾಲಿಸುವಂತೆ ವಿನಂತಿಸಿದ ಅವರು ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿದೆ ಎಂದು ಹೇಳಿದರು.
ಜಾಥಾದಲ್ಲಿ ಸುರಕ್ಷತೆಯ ಕುರಿತ ಮಾಹಿತಿ ಕರಪತ್ರಗಳನ್ನು ಹಂಚಲಾಯಿತು.
ರೋಟರಿ ಕ್ಲಬ್ ವಲಯ 5ರ ಅಸಿಸ್ಟೆಂಟ್ ಗವರ್ನರ್ ಎ ಜಗಜೀವನ್ ದಾಸ್ ರೈ, ಪುತ್ತೂರು ರೋಟರಿ ವಲಯ ಸೇನಾನಿ ಡಾ. ಹರ್ಷ ಕುಮಾರ್ ರೈ ಮಾಡಾವು, ಸಂಚಾರ ಪೊಲೀಸ್ ಠಾಣೆ ಎಸ್.ಐ ಕುಟ್ಟಿ ಎಂ.ಕೆ, ರೋಟರಿ ಯುವದ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಶ್ರೇಯಾ, ಕ್ಲಬ್‍ನ ಸಂಯೋಜಕರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಪುತ್ತೂರು ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ವಂದಿಸಿದರು. ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ನಿರೂಪಿಸಿದರು.







