ಕಿಟಾಳ್ ಯುವ ಮತ್ತು ಆರ್ಸೊ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

ಮಂಗಳೂರು: 2022 ನೇ ಸಾಲಿನ ಲಿಯೋ ರೊಡ್ರ್ರಿಗಸ್ ಕುಟುಂಬದ ದತ್ತಿ ಕಿಟಾಳ್ ಯುವ ಪುರಸ್ಕಾರಕ್ಕೆ ಮೂಡುಬೆಳ್ಳೆಯ ಯುವಕವಿ, ಸಂಗೀತಗಾರ ಕ್ಲೈವ್ ಲ್ಯಾರಿ ಡಿ’ಸೊಜಾ ಮತ್ತು ಡಾ. ಆಸ್ಟಿನ್ ಡಿ’ಸೊಜಾ ಪ್ರಭು ಕುಟುಂಬ ದತ್ತಿ ಆರ್ಸೊ ಪತ್ರಿಕೋದ್ಯಮ ಪುರಸ್ಕಾರಕ್ಕೆ ಬೆಳ್ಳೂರಿನ ಆವಿಲ್ ರಸ್ಕೀನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿ ಪುರಸ್ಕಾರ ರೂ. 25, 0000/- ನಗದು ಮತ್ತು ಸನ್ಮಾನ ಪತ್ರ ಹೊಂದಿದ್ದು, ದಿನಾಂಕ 1 ಜನವರಿ 2023 ರಂದು ರವಿವಾರ ಮಂಗಳೂರಿನ ಜೆಪ್ಪು ಮರಿಯ ಜಯಂತಿ ಸಭಾಭವನದಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ಹೇಳಲಾಗಿದೆ.
ಕಾರ್ಯಕ್ರಮದಲ್ಲಿ ಚಿಕಾಗೊದಿಂದ ಪ್ರಕಟವಾಗುವ ಕೊಂಕಣಿಯ ಏಕೈಕ ಡಿಜಿಟಲ್ ವಾರಪತ್ರಿಕೆ ’ವೀಜ್ - ಕೊಂಕಣಿ’ ಸಂಪಾದಕ - ಪ್ರಕಾಶಕ ಲ| ಡಾ| ಆಸ್ಟಿನ್ ಡಿ’ಸೊಜಾ ಪ್ರಭು ಮತ್ತು ಅಬುದಾಬಿಯ ಅನಿವಾಸಿ ಉದ್ಯಮಿ ಸಿ.ಎ. ವಲೇರಿಯನ್ ದಲ್ಮೇದಾ ಪ್ರಶಸ್ತಿ ಪ್ರಧಾನ ಮಾಡಲಿರುವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
1977 ರಿಂದ 1997 ರವರೆಗೆ ಮಂಗಳೂರಿನಿಂದ ಎಡೆಬಿಡದೆ 20 ವರ್ಷಗಳ ಕಾಲ ’ಕಾಣಿಕ್’ ಪಾಕ್ಷಿಕ ಪತ್ರಿಕೆಯನ್ನು ನಡೆಸಿದ ಆವಿಲ್ ರಸ್ಕೀನ್ಹಾ ನಗರದ ಕುಲಶೇಖರದಲ್ಲಿ ’ಸಾಂತಾಕ್ರೂಝ್ ಪ್ರೆಸ್’ ಹೆಸರಿನ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದು, ಸುಮಾರು ಹನ್ನೆರಡು ಕೊಂಕಣಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಟನಾಗಿ ಕೊಂಕಣಿ, ಕನ್ನಡ, ತುಳು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಲಯನ್ಸ್ ಕ್ಲಬ್ ಮೂಲಕ ಸಮಾಜ ಸೇವೆಯನ್ನೂ ಮಾಡಿರುತ್ತಾರೆ. ಪ್ರಸ್ತುತ ಕುಟುಂಬ ಸಮೇತ ಬಂಟ್ವಾಳದ ಬೆಳ್ಳೂರಿನಲ್ಲಿ ವಾಸವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಲೈವ್ ಸೊಜ್, ಬೊಳಿಯೆ ಅವರ ಕಾವ್ಯನಾಮದಿಂದ ಕೊಂಕಣಿಯಲ್ಲಿ 150 ಕ್ಕೂ ಮಿಕ್ಕಿ ಕವಿತೆ, ಕಥೆ ಬರೆದು ಪ್ರಕಟಿಸಿರುವ ಯುವಬರಹಗಾರ ಮೂಡುಬೆಳ್ಳೆಯ ಲ್ಯಾರಿ ಕ್ಲೈವ್ ಡಿ’ಸೊಜಾ ಕೊಂಕಣಿ ಹಾಡುಗಳನ್ನು ಬರೆದು, ರಾಗ ಸಂಯೋಜನೆ ಮಾಡಿ ಡಿಜಿಟಲ್ ಮಾದ್ಯಮದಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಹೋಟೆಲ್ ಉದ್ಯಮದಲ್ಲಿ ಪದವಿಯನ್ನು ಪಡೆದು ಪ್ರಸ್ತುತ ಇಂಡಿಯನ್ ಓಶಿಯನ್, ಉತ್ತರ ಐರ್ಲ್ಯಾಂಡ್ ನಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕೊಂಕಣಿ ಸಾಹಿತ್ಯಕ್ಕೆ ಸಂಬಂದಪಟ್ಟ ’ಕಿಟಾಳ್’ ಅಂತರ್ಜಾಲ ಪತ್ರಿಕೆ 2011 ರಿಂದ ನಿರಂತರವಾಗಿ ಪ್ರಕಟವಾಗುತ್ತಿದ್ದು, ಕೊಂಕಣಿ, ಕವಿ - ವಿಮರ್ಷಕ ಎಚ್ಚೆಮ್, ಪೆರ್ನಾಲ್ ಇದರ ಸಂಪಾದಕ - ಪ್ರಕಾಶಕರಾಗಿದ್ದಾರೆ. ’ವಿಚಾರ - ವಿಜ್ಞಾನ - ಸಾಹಿತ್ಯ’ ಧ್ಯೇಯದಡಿ ಕಳೆದ 9 ವರ್ಷಗಳಿಂದ ಸಾಹಿತ್ಯಿಕ ಮಾಸಿಕವಾಗಿ ಪ್ರಕಟವಾಗುತ್ತಿರುವ ’ಆರ್ಸೊ’ ಪತ್ರಿಕೆಗೆ ಕವಿ, ಗೀತೆರಚನೆಕಾರ ವಿಲ್ಸನ್, ಕಟೀಲ್ ಸಂಪಾದಕರಾಗಿದ್ದಾರೆ.
ವರ್ಷಂಪ್ರತಿ ಓರ್ವ ಯುವ ಬರಹಗಾರ ಮತ್ತು ಹಿರಿಯ ಪತ್ರಕರ್ತರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ’ಕಿಟಾಳ್’ ಅಂತರ್ಜಾಲ ಮತ್ತು ’ಆರ್ಸೊ’ ಪತ್ರಿಕೆ ರೂಡಿ ಮಾಡಿಕೊಂಡಿದೆ. ಕೊಂಕಣಿ ಕವಿ - ಚಿಂತಕ ಟೈಟಸ್ ನೊರೊನ್ಹಾ - ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದು, ಅಬುದಾಬಿಯ ಅನಿವಾಸಿ ಉದ್ಯಮಿ ಮತ್ತು ಕೊಂಕಣಿ ಸಮರ್ಥಕ ಲಿಯೋ ರೊಡ್ರಿಗಸ್ ಹಾಗೂ ಚಿಕಾಗೊ, ಅಮೆರಿಕಾದ ನಿವಾಸಿ ಲ| ಡಾ| ಆಸ್ಟಿನ್ ಡಿ’ಸೊಜಾ ಪ್ರಭು ಈ ಪ್ರಶಸ್ತಿಗಳ ಪೋಷಕರಾಗಿದ್ದಾರೆ ಎಂದು ಹೇಳಲಾಗಿದೆ.