ಉಡುಪಿ: ಸ್ತನ ಕ್ಯಾನ್ಸರ್, ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರ

ಉಡುಪಿ: ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಎನ್‌ಸಿಡಿ ವಿಭಾಗ ಜಂಟಿ ಯಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಉಚಿತ ಸ್ತನ ಕ್ಯಾನ್ಸರ್ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜನರ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ವಾತಾವರಣದಿಂದಾಗಿ ಹಲವು ರೋಗಗಳು ಕಾಣಿಸಿಕೊಳ್ಳುತಿದ್ದು, ಇಂತಹ ಸಂದರ್ಭದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರಗಳ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಅವರು ಈ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ನೀಡಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾದ್ಯಾಯ ಮತ್ತು ಆರೋಗ್ಯಾಧಿಕಾರಿ ಡಾ.ಸಾತ್ವಿಕ್ ಉಪಸ್ಥಿತರಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಪ್ರಾದ್ಯಾಪಕಿ ಡಾ.ಅಫ್ರೋಝ್ ಶಿಬಿರದ ಉದ್ದೇಶ ಹಾಗೂ 30 ವರ್ಷ ಪ್ರಾಯದ ಬಳಿಕ ಪ್ರತಿಯೊಬ್ಬ ಮಹಿಳೆಯರು ಇಂತಹ ಉಚಿತ ಶಿಬಿರಗಳ ಸದುಪಯೋಗ ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಶಿಬಿರದಲ್ಲಿ ಎನ್‌ಪಿಸಿಡಿಎಸ್ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಆರೋಗ್ಯ ಕಾರ್ಯಕರ್ತರು ಮತ್ತು ಮಹಿಳಾ ಸಿಬ್ಬಂದಿಗಳು ಭಾಗವಹಿಸಿದರು. ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಪುಷ್ಪಾ, ಸುರೇಖಾ, ಜಯಶ್ರೀ ಮತ್ತು ಗೀತಾ ಉಪಸ್ಥಿತರಿದ್ದರು. ಡಾ.ಅಂಜಲಿ ಕಾರ್ಯಕ್ರಮ ನಿರೂಪಿಸಿದರು.