ಉಡುಪಿ: ಡಿ.30ರಂದು ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ
ಉಡುಪಿ: ಉಡುಪಿ ವಕೀಲರ ಸಂಘದ ಬಹುದಿನಗಳ ಬೇಡಿಕೆಯಾದ ವಕೀಲರ ‘ವನ, ಮಧ್ಯಸ್ಥಿಕೆ ಕೇಂದ್ರ ಸಹಿತ ವಿವಿ‘ ಸೌಲಭ್ಯಗಳನ್ನೊಳಗೊಂಡ ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಉಡುಪಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ಉಡುಪಿ ವಕೀಲರ ಸಂಘದ ಸಹಯೋಗದಲ್ಲಿ ಡಿ.30ರ ಶುಕ್ರವಾರ ಬೆಳಗ್ಗೆ 10:30ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ನೆರವೇರಿಸಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವಿ. ವರಾಲೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಹಾಗೂ ಹೈಕೋರ್ಟ್ ನ ಇನ್ನೋರ್ವ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿರುವರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ, ಸಿ.ಎಂ.ಜೋಶಿ, ಟಿ.ಜಿ.ಶಿವಶಂಕರೇಗೌಡ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ರಾಜ್ಯ ಕಾನೂನು, ಸಂಸದೀಯ ವ್ಯವಹಾರ, ಶಾಸನ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟಾರ್ ಜನರಲ್ ಮುರಳೀಧರ್ ಪೈ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿಗಳು ಮತ್ತು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ನಾಗರಾಜ್ ತಿಳಿಸಿದರು.
ನೂತನ ನ್ಯಾಯಾಲಯದ ಮಾಹಿತಿ: ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣವು 10,830 ಚ.ಮೀ.ವಿಸ್ತೀರ್ಣ ಹೊಂದಿದ್ದು, 2 ಹಂತದ ಬೇಸ್‌ಮೆಂಟ್ ಮಹಡಿಯಲ್ಲಿ ವಾಹನಗಳ ನಿಲುಗಡೆ, ಅಂಗಡಿಗಳು ಮತ್ತು ಇ-ಲೈಬ್ರೆರಿಗೆ ಅವಕಾಶ ಕಲ್ಪಿಸಲಾಗಿದೆ. ನೆಲ ಮಹಡಿಯಲ್ಲಿ ಅಂಚೆ ಕಛೇರಿ, ಬ್ಯಾಂಕ್, ಎಟಿಎಂ ಕೌಂಟರ್, ಡಿಸ್ಪೆನ್ಸರಿ, ಇ-ಸೇವಾ ಕೇಂದ್ರ, ವಕೀಲರ ಸಹಕಾರ ಸಂಘ, ನ್ಯಾಯಾಂಗ ನೌಕರರ ಸಂಘ, ಜುಡಿಶಿಯಲ್ ಸರ್ವಿಸ್ ಸೆಂಟರ್ ಮತ್ತು ಸೆಂಟ್ರಲ್ ರೆಕಾರ್ಡ್ ರೂಮ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊದಲನೇ ಮಹಡಿಯಲ್ಲಿ ಪುರುಷ ಮತ್ತು ಮಹಿಳಾ ವಕೀಲರಿಗೆ ಪ್ರತ್ಯೇಕ ಸ್ಥಳಾವಕಾಶ, ವಕೀಲರ ಸಂಘದ ಕಛೇರಿ, ಲೈಬ್ರೆರಿ, ವಿಡಿಯೋ ಕಾನ್ಪರೆನ್ಸ್ ಕೋಣೆ, ಕಾನ್ಫರೆನ್ಸ್ ಹಾಲ್ ಹಾಗೂ ಸರಕಾರಿ ಅಭಿಯೋಜಕರು ಮತ್ತು ಸರಕಾರಿ ವಕೀಲರುಗಳ ಕಛೇರಿಗಳಿರುತ್ತವೆ.ಎರಡನೇ ಮಹಡಿಯಲ್ಲಿ ಮ‘್ಯಸ್ಥಿಕೆ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಛೇರಿ, ಕಾನೂನು ನೆರವು ರಕ್ಷಣಾ ಸಲಹೆಗಾರರ ಕೊಠಡಿಗಳು, ಅಶಕ್ತ ಸಾಕ್ಷಿಗಳ ವಿಚಾರಣಾ ಕೇಂದ್ರ ಇವುಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಮೂರನೇ ಮಹಡಿಯಲ್ಲಿ 2 ನ್ಯಾಯಾಲಯ ಮತ್ತು ಅದಕ್ಕೆ ಸಂಬಂಧಿಸಿದ ಕಛೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದವರು ವಿವರಿಸಿದರು.
ಪ್ರಥಮ ಹಂತದ ಕಾಮಗಾರಿಗೆ ಕರ್ನಾಟಕ ಸರಕಾರ ಈಗಾಗಲೇ 15.14 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಕಾಮಗಾರಿ ಅತೀ ಶೀಘ್ರ ಆರಂ‘ಗೊಳ್ಳಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ ಬಿ. ದಿನೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್, ಹಿರಿಯ ವಕೀಲರಾದ ಎ. ಹಾಗೂ ಅಶೀದುಲ್ಲಾ ಉಪಸ್ಥಿತರಿದ್ದರು.