ತೀರ್ಥಹಳ್ಳಿ: ಕುವೆಂಪು ಕಾರ್ಯಕ್ರಮಕ್ಕೆ ಆಗಮಿಸಿದ ರೋಹಿತ್ ಚಕ್ರತೀರ್ಥಗೆ ಪ್ರತಿಭಟನೆಯ ಬಿಸಿ
ಪ್ರಗತಿಪರ ಸಂಘಟನೆಗಳಿಂದ 'ಗೋ ಬ್ಯಾಕ್ ' ಅಭಿಯಾನ

ಶಿವಮೊಗ್ಗ, ಡಿ.28: ನಾಡಗೀತೆಯನ್ನು ವಿರೂಪಗೊಳಿಸಿದ ಆರೋಪ ಹೊಂದಿರುವ ರೋಹಿತ್ ಚಕ್ರತೀರ್ಥ ಅವರಿಗೆ ಬುಧವಾರ ತೀರ್ಥಹಳ್ಳಿಯಲ್ಲಿ ಪ್ರತಿಭಟನೆಯ ಬಿಸಿ ತಟ್ಟಿತು.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಡೆಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ಅವರು ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ವಿಷಯ ಕುರಿತು ಮುಖ್ಯ ಭಾಷಣ ಮಾಡಲು ಬಂದಿದ್ದರು. ಈ ವೇಳೆ 'ಕುವೆಂಪು ಅವರನ್ನು ಅವಮಾನಿಸುವ ಮೂಲಕ ರೋಹಿತ್ ಚಕ್ರತೀರ್ಥ ವಿಕೃತಿ ಮೆರೆದಿದ್ದಾರೆ. ಇವರಿಗೆ ಕುವೆಂಪು ಅವರ ಬಗ್ಗೆ ಮಾತನಾಡಲು ಅವಕಾಶ ನೀಡಬಾರದು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತೀರ್ಥಹಳ್ಳಿಯಲ್ಲಿರುವ ಕೊಪ್ಪ ವೃತ್ತದಲ್ಲಿರುವ ಕುವೆಂಪು ಪ್ರತಿಮೆ ಎದುರು ಕುವೆಂಪು ಅಭಿಮಾನಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ರೋಹಿತ್ ಚಕ್ರ ತೀರ್ಧ ರವರನ್ನು ತೀರ್ಥಹಳ್ಳಿಗೆ ಕರೆತರುತ್ತಿರುವವರು ರಾಷ್ಟ್ರ ಕವಿ ಕುವೆಂಪು ಮತ್ತು ನಮ್ಮೂರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ದೂರಿದರು.
ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ಈ ಪರಿವಾರದ ವ್ಯಕ್ತಿ ದೇಶದ ಹೋರಾಟಗಾರರ ಬಗ್ಗೆ,ಕನ್ನಡ ಸಾಹಿತಿಗಳ ಬಗ್ಗೆ ಗೌರವ ಇಲ್ಲದವರು. "ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ " ಕುರಿತಂತೆ ಮಾತಾಡುವುದಕ್ಕೆ ಉದ್ದೇಶಪೂರ್ವಕವಾಗಿ ಕುವೆಂಪು ಅವರನ್ನು ನಾರಾಯಣ ಗುರುಗಳನ್ನು, ನಾಡಗೀತೆಯನ್ನು ಒಳಉಡುಪಿಗೆ ಹೋಲಿಸಿರುವ ರೋಹಿತ್ ಚಕ್ರ ತೀರ್ಥರನ್ನೇ ಆಹ್ವಾನಿಸಿರುವುದು ನಿಜಕ್ಕೂ ನಾಚಿಕೆಗೇಡು ಎಂದರು.
ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್ ಮಾತನಾಡಿ, ಸಂಘ ಪರಿವಾರದ ಬಿಜೆಪಿಯ ಏಜೆಂಟ್ ಆಗಿರುವ ಈತ ಕನ್ನಡ ನಾಡು ನುಡಿಗೆ ಮಾಡಿದ ಅಪಮಾನ. ಇದು ಅಕ್ಷಮ್ಯ ಅಪರಾಧ ಎಂದರು.
ಈ ಪ್ರತಿಭಟನೆಯಲ್ಲಿ ಚಿಂತಕ ದೇವರಾಜ್ ನೆಂಪೆ,ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರಭಾಕರ್,ಆದರ್ಶ ಹುಂಚದ ಕಟ್ಟೆ,ನಾಗರಾಜ್ ಪೂಜಾರಿ,ಕರವೇಯ ವೆಂಕಟೇಶ್ ಹೆಗಡೆ,ಹರ್ಷೇಂದ್ರ ಕುಮಾರ್,ಪೂರ್ಣೇಶ್ ಕೆಳಕೆರೆ, ಮಹಾಬಲೇಶ್,ಕಸಾಪದ ಗಾಯತ್ರಿ ಶೇಷ್ ಗಿರಿ,ಮುಂತಾದವರಿದ್ದರು.
ಪ್ರತಿಭಟನಕಾರರು ಪೊಲೀಸ್ ವಶಕ್ಕೆ:
ರೋಹಿತ್ ಚಕ್ರತೀರ್ಥ ಆಗಮನ ವಿರೋಧಿಸಿ ಕೊಪ್ಪ ವೃತ್ತದಲ್ಲಿರುವ ಕುವೆಂಪು ಪ್ರತಿಮೆ ಎದುರು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.







