ಕಾಲಮಿತಿಯೊಳಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಸಲು ದ.ಕ. ಜಿ.ಪಂ. ಸಿಇಒ ಡಾ. ಕುಮಾರ್ ಸೂಚನೆ
ಪ್ರಗತಿ ಸಾಧಿಸದ ಇಲಾಖೆಗಳಿಗೆ ನೋಟಿಸ್

ಮಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭ್ಯುದಯಕ್ಕಾಗಿ ವಿವಿ‘ ಇಲಾಖೆಗಳಿಗೆ ಹಲವು ಯೋಜನೆಗಳಡಿ ಬಿಡುಗಡೆ ಮಾಡಲಾಗುವ ಅನುದಾನವನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ವೆಚ್ಚ ಮಾಡಿ, ನೀಡಲಾದ ಗುರಿ ಸಾಧಿಸುವಂತೆ ದ.ಕ. ಜಿಪಂ ಸಿಇಒ ಡಾ.ಕುಮಾರ್ ಸೂಚನೆ ನೀಡಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಘಟಕ ಮತ್ತು ಪರಿಶಿಷ್ಟ ವರ್ಗಗಳ ಉಪಯೋಗ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾಗುವ ಅನುದಾನದ ಸದ್ಬಳಕೆಯಾಗಬೇಕು. ಅರ್ಹ ಫಲಾನುಭವಿಗಳಿಗೆ ಆ ಯೋಜನೆಗಳ ಲಾಭ ದೊರೆಯಬೇಕು. ಆಯಾ ಯೋಜನೆಗಳಡಿ ಸರಕಾರ ನೀಡುವ ಅನುದಾನ ಕಾಲಮಿತಿಯೊಳಗೆ ವಿನಿಯೋಗವಾಗಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸಂಬಂಧಿಸಿದ ಕಾನೂನಿನಲ್ಲಿ ಅವಕಾಶವಿದೆ ಎಂದು ಡಾ.ಕುಮಾರ್ ಹೇಳಿದರು.
ವರ್ಷಾಂತ್ಯವಾಗುತ್ತಿದ್ದರೂ ಕೆಲವು ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ಕಂಡುಬಂದಿಲ್ಲ. ಶೇ.೭೦ಕ್ಕೂ ಕಡಿಮೆ ಪ್ರಗತಿ ಸಾಧಿಸಿದ ಇಲಾಖೆಗಳ ವಿರುದ್ಧ ಕಾಯ್ದೆಯನುಸಾರ ಕ್ರಮಕೈಗೊಳ್ಳುವಂತೆ ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶರಿಗೆ ಸೂಚನೆ ನೀಡಿದರು.
ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಲಾನು‘ವಿಗಳ ಆಯ್ಕೆಯಾಗಬೇಕು, ಆಯ್ಕೆ ವಿಳಂಬಕ್ಕೆ ಆಸ್ಪದವಾಗದಂತೆ ಗಮನ ಹರಿಸಬೇಕು, ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಸೂಕ್ತ ಪ್ರಗತಿ ಸಾಧಿಸದ ಸಹಕಾರ ಇಲಾಖೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಮುಖ್ಯಸ್ಥರಿಗೆ ಕೂಡಲೇ ನೊಟೀಸ್ ಜಾರಿಗೊಳಿಸುವಂತೆ ಡಾ. ಕುಮಾರ್ ಸೂಚಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮದಡಿ ಇನ್ನೂ ಅನುದಾನ ಬಿಡುಗಡೆಯಾಗಿಲ್ಲವೆಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಸಂಬಂಧಿಸಿದ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಂದ ಸ್ಪಷ್ಟನೆ ಪಡೆಯುವಂತೆ ಕುಮಾರ್ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮಹಾನಗರ ಪಾಲಿಕೆಯ ಆಡಳಿತದ ಉಪ ಆಯುಕ್ತ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ ಸಹಿತ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
