ಚಿಕ್ಕಮಗಳೂರು | ಸಿಬ್ಬಂದಿ , ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತ್ಯು: ಆರೋಪ
ಆಸ್ಪತ್ರೆ ಎದುರು ಮಗುವಿನ ಸಂಬಂಧಿಗಳಿಂದ ಪ್ರತಿಭಟನೆ

ಚಿಕ್ಕಮಗಳೂರು, ಡಿ.28: ಶುಶ್ರೂಷಕಿಯ ನಿರ್ಲಕ್ಷ್ಯಿದಿಂದಾಗಿ 4 ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪೋಷಕರು, ಸಂಬಂಧಿಕರು ಆಸ್ಪತ್ರೆ, ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಗರದ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ಸಮೀಪದ ಸೂರಾಪುರ ಗ್ರಾಮದ ಗೋಪಾಲ್ ಹಾಗೂ ಮೀನಾಕ್ಷಿ ದಂಪತಿಯ 4ತಿಂಗಳ ಮಗು ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರು ಮತ್ತು ಶುಶ್ರೋಷಕಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
4 ತಿಂಗಳ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಪೋಷಕರು ಮಗುವನ್ನು ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಯ ಮಕ್ಕಳ ಘಟಕದ ವೈದ್ಯರಿಂದ ತಪಾಸಣೆಗೊಳಪಡಿಸಿದ್ದಾರೆ. ವೈದ್ಯರ ಸಲಹೆಯಂತೆ ಮಗುವನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಹಾಲು ಕುಡಿಸಬಾರದೆಂದು ವೈದ್ಯರು ಹೇಳಿದ್ದರೂ ಬುಧವಾರ ಸಂಜೆಯವರೆಗೂ ಆರೋಗ್ಯವಾಗಿದ್ದ ಮಗುವಿಗೆ ಸಂಜೆ ವೇಳೆ ಬಂದ ಶುಶ್ರೊಷಕಿಯೊಬ್ಬರು ಮಗುವಿಗೆ ಹಾಲು ಕುಡಿಸಲು ಮುಂದಾಗಿದ್ದಾರೆ. ಹಾಲು ಕುಡಿಸುತ್ತಿದ್ದಂತೆ ಮಗುವಿನ ಬಾಯಿ, ಮೂಗಿನಲ್ಲಿ ಹಾಲು ಹೊರ ಬಂದು ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆ ಎದುರು ಪ್ರತಿಭಟನೆ; ಶುಶ್ರೂಷಕಿ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆ ಹಿರಿಯ ವೈದ್ಯರು ಸೂಕ್ತ ಕ್ರಮದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.
ಈ ಬಗ್ಗೆ ಮಗುವಿನ ಸಂಬಂಧಿ ತೇಗೂರು ಮಂಜುಳಾ ಮಾತನಾಡಿ, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮಲ್ಲೇಗೌಡ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗು ನಿರಂತರವಾಗಿ ಅಳುತ್ತಿತ್ತು, ಮಗುವಿಗೆ ಹಾಲು ಕೊಡಬೇಡಿ ಎಂದು ವೈದ್ಯರು ಹೇಳಿದ್ದರಿಂದ ಹಾಲು ನೀಡಿರಲಿಲ್ಲ. ಆದರೆ ಸಂಜೆ ವೇಳೆ ಆಸ್ಪತ್ರೆಗೆ ಬಂದ ಶುಶ್ರೂಷಕಿಯೊಬ್ಬರು ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಿದ್ದು, ಹಾಲು ಕುಡಿಯುತ್ತಿದ್ದಂತೆ ಮೂಗು ಬಾಯಲ್ಲಿ ಹಾಲು ಬಂದಿದ್ದು, ಮಗು ಮೃತಪಟ್ಟಿದೆ. ವೈದ್ಯರು, ನರ್ಸ್ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ. ತೀರ ಸಮಸ್ಯೆ ಇದ್ದರೇ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಬಹುದಾಗಿತ್ತು ಎಂದು ಅಳಲು ತೋಡಿಕೊಂಡರು







