ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಜಾರ್ಖಂಡ್ ನಟಿ ಗುಂಡಿಗೆ ಬಲಿ
![ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಜಾರ್ಖಂಡ್ ನಟಿ ಗುಂಡಿಗೆ ಬಲಿ ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಜಾರ್ಖಂಡ್ ನಟಿ ಗುಂಡಿಗೆ ಬಲಿ](https://www.varthabharati.in/sites/default/files/images/articles/2022/12/28/361658-1672245362.jpg)
ಹೌರಾ, ಡಿ.28: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಜಾರ್ಖಂಡ್ ನ ನಟಿ ರಿಯಾ ಕುಮಾರಿ ಗುಂಡಿಗೆ ಬಲಿಯಾಗಿದ್ದಾರೆ. ರಿಯಾ ಲೂಟಿಕೋರರಿಂದ ತನ್ನ ಪತಿಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ರಿಯಾ ತನ್ನ ಪತಿ ಚಿತ್ರನಿರ್ಮಾಪಕ ಪ್ರಕಾಶ್ ಕುಮಾರ್ ಮತ್ತು ಎರಡರ ಹರೆಯದ ಪುತ್ರಿಯೊಂದಿಗೆ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 16ರ ಮೂಲಕ ಕೋಲ್ಕತಾಕ್ಕೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಬಗ್ನಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಷರೇಖಾ ಬಳಿ ಮೂತ್ರ ವಿಸರ್ಜನೆಗಾಗಿ ಕಾರನ್ನು ನಿಲ್ಲಿಸಿದ್ದೆ, ಈ ವೇಳೆ ತನ್ನ ಮೇಲೆ ದಾಳಿ ನಡೆಸಿದ್ದ ಮೂವರು ತನ್ನನ್ನು ದೋಚಲು ಪ್ರಯತ್ನಿಸಿದ್ದರು. ತನ್ನ ರಕ್ಷಣೆಗೆ ರಿಯಾ ಧಾವಿಸಿದಾಗ ಅವರು ಆಕೆಗೆ ಗುಂಡಿಟ್ಟು ಅಲ್ಲಿಂದ ಪರಾರಿಯಾಗಿದ್ದರು ಎಂದು ಕುಮಾರ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾರಿನಲ್ಲಿ ತನ್ನ ಪತ್ನಿಯನ್ನು ಹಾಕಿಕೊಂಡು ನೆರವನ್ನು ಅರಸಿ ಸುಮಾರು ಮೂರು ಕಿ.ಮೀ. ದೂರ ಸಾಗಿದಾಗ ಕುಲ್ಗಾಚಿಯಾ-ಪಿರ್ತಾಲಾ ಎಂಬಲ್ಲಿದ್ದ ಸ್ಥಳೀಯರು ತನ್ನ ಪತ್ನಿಯನ್ನು ಉಲುಬೆರಿಯಾದ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು, ಆದರೆ ಆ ವೇಳೆಗಾಗಲೇ ಆಕೆ ಕೊನೆಯುಸಿರೆಳೆದಿದ್ದಳು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
‘ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ, ಮೃತಳ ಪತಿಯನ್ನೂ ಪ್ರಶ್ನಿಸಲಾಗುತ್ತಿದೆ. ವಿಧಿವಿಜ್ಞಾನ ಪರೀಕ್ಷೆಗಾಗಿ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಮಾರ ನೆರವಿಗಾಗಿ ಸಂಪರ್ಕಿಸಿದ್ದ ಸ್ಥಳೀಯರನ್ನೂ ನಾವು ವಿಚಾರಿಸಲಿದ್ದೇವೆ ’ ಎಂದು ಪೊಲೀಸರು ತಿಳಿಸಿದ್ದಾರೆ.