ಭಾರತೀಯ ಫಾರ್ಮಾ ಕಂಪೆನಿಯ ಕಫ್ ಸಿರಪ್ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವು: ಆರೋಪ

ತಾಷ್ಕೆಂಟ್, ಡಿ.28: ಭಾರತೀಯ ಫಾರ್ಮಾಸ್ಯೂಟಿಕಲ್ ಕಂಪೆನಿಯೊಂದು ಉತ್ಪಾದಿಸಿರುವ ಕೆಮ್ಮಿನ ಔಷಧಿ (ಕಫ್ ಸಿರಪ್)ಯ ಅಡ್ಡಪರಿಣಾಮಗಳಿಂದಾಗಿ ದೇಶದಲ್ಲಿ 18 ಮಕ್ಕಳು ಮೃತಪಟ್ಟಿರುವುದಾಗಿ ಉಜ್ಬೇಕಿಸ್ತಾನದ (Uzbekistan) ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.
ಮೃತಪಟ್ಟ ಮಕ್ಕಳೆಲ್ಲರೂ ಉತ್ತರಪ್ರದೇಶದ ನೊಯ್ಡ ಮೂಲದ ‘ಮಾರಿಯೊನ್ ಬಯೊಟೆಕ್ ಲಿಮಿಟೆಡ್’ ಉತ್ಪಾದಿಸಿರುವ ಡೊಕ್ 1 ಮ್ಯಾಕ್ಸ್ ಸಿರಪ್ ಹಾಗೂ ಶೀತನಿರೋಧಕ ಮಾತ್ರೆಗಳನ್ನು ಸೇವಿಸಿದ್ದರೆಂದು ಅದು ಹೇಳಿದೆ.
ಡಾಕ್ 1 ಮ್ಯಾಕ್ಸ್ ಸಿರಪ್ ಮುಖ್ಯ ಅಂಶವು ಪ್ಯಾರಾಸಿಟಾಮಲ್ ಆಗಿದ್ದು, ಈ ಔಷಧಿಯನ್ನು ಪಾಲಕರು ತಮ್ಮ ಮಕ್ಕಳಿಗೆ ಶೀತನಿರೋಧಕವಾಗಿ ಸ್ವಇಚ್ಛೆಯಿಂದ ಅಥವಾ ಫಾರ್ಮಸಿ ಮಾರಾಟಗಾರರ ಶಿಫಾರಸಿನ ಮೇರೆಗೆ ಅಸಮರ್ಪಕವಾಗಿ ನೀಡಿದ್ದರು. ರೋಗಿಗಳ ಆರೋಗ್ಯ ಪರಿಸ್ಥಿತಿ ಹದಗೆಡಲು ಇದು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಈ ಕೆಮ್ಮಿನ ಔಷಧಿಯಲ್ಲಿ ಎಥಿಲಿನ್ ಗ್ಲೈಕೊಲ್ ರಾಸಾಯನಿಕವು ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿಕೆ ತಿಳಿಸಿದೆ.
ಔಷಧಿ ನಿಯಾಮವಳಿಗಳ ಪ್ರಕಾರ ಕೆಮ್ಮಿನ ಸಿರಪ್ ಗಳಲ್ಲಿ ಎಥಿಲಿನ್ ಗ್ಲೈಕೊಲ್ನ ಅಂಶಗಳು ಇರಕೂಡದು. ಸಾಮಾನ್ಯವಾಗಿ ಕೈಗಾರಿಕಾ ದರ್ಜೆಯ ಗ್ಲಿಸರಿನ್ನಲ್ಲಿ ಕಂಡುಬರುವ ಈ ರಾಸಾಯನಿಕವನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲು ಅನುಮತಿಯಿರವುದಿಲ್ಲ. ಕೆಮ್ಮಿನ ಔಷಧಿಯ ತಯಾರಿಗೆ ಗ್ಲಿಸರಿನ್ ಐಪಿ ಅಥವಾ ಇಂಡಿಯನ್ ಫಾರ್ಮಾಕೊಪೊಯಾ ದರ್ಜೆಯ ರಾಸಾಯನಿಕವನ್ನು ಬಳಸಬೇಕಾಗುತ್ತದೆ.
ಎಥಿಲಿನ್ ಗ್ಲೈಕೊಲ್ ಹಾಗೂ ಡಿಥಿಲಿನ್ ಗ್ಲೈಕೋಲ್ ಅಂಶಗಳು ವಾಂತಿ, ಮೂರ್ಛೆಗೆ ಕಾರಣವಾಗುತ್ತದೆ, ಅಲ್ಲದೆ ರಕ್ತಪರಿಚಲನೆ ವ್ಯವಸ್ಥೆ ಮೇಲೆ ಪರಿಣಾಮವುಂಟು ಮಾಡುತ್ತದೆ ಮತ್ತು ಮೂತ್ರಪಿಂಡವೈಫಲ್ಯವನ್ನುಂಟು ಮಾಡುತ್ತದೆ ಎಂದು ಉಜ್ಭೆಕ್ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ಮೃತರೆಲ್ಲರೂ ದಿನಕ್ಕೆ ಮೂರು-ನಾಲ್ಕು ಸಲ 2.5ರಿಂದ 5 ಮಿ. ಲೀಟರ್ ಕೆಮ್ಮಿನ ಔಷಧಿಯನ್ನು ಮನೆಯಲ್ಲಿ ಸೇವಿಸಿದ್ದು, ಇದು ಈ ಔಷಧಿ ಸೇವನೆಯ ನಿಗದಿತ ಮಾನದಂಡದ ಡೋಸ್ಗಿಂತ ಅಧಿಕವಾಗಿದೆ ಎಂದು ಉಜ್ಭೆಕ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಔಷಧಿ ಕಂಪೆನಿ ಮೆಡಿಯನ್ ಫಾರ್ಮಾದ ಹರ್ಯಾಣ ಘಟಕ ಉತ್ಪಾದಿಸಿದ ಕೆಮ್ಮಿನ ಸಿರಪ್ ಸೇವಿಸಿ ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಆಫ್ರಿಕ ಖಂಡದ ರಾಷ್ಟ್ರವಾದ ಗಾಂಬಿಯಾದಲ್ಲಿ, ಕನಿಷ್ಠ 70 ಮಕ್ಕಳು ಮೃತಪಟ್ಟ ಘಟನೆ ಜಾಗತಿಕ ಮಟ್ಟದಲ್ಲಿ ಕಳವಳವನ್ನು ಸೃಷ್ಟಿಸಿತ್ತು. ರಾಜ್ಯ ಸರಕಾರ ಹಾಗೂ ಕೇಂದ್ರೀಯ ಔಷಧಿ ನಿಯಂತ್ರಣ ಪ್ರಾಧಿಕಾರಗಳು ನಡೆಸಿ ಜಂಟಿ ತನಿಖೆಯಲ್ಲಿ ಮೆಡಿಯನ್ ಫಾರ್ಮಾ ಕಂಪೆನಿಯು ಕೆಮ್ಮಿನ ಸಿರಪ್ ತಯಾರಿಕೆಯಲ್ಲಿ 12 ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿತ್ತು ಹಾಗೂ ನಂತರ ಕಾರ್ಖಾನೆಯಲ್ಲಿ ಔಷಧಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮೆಡಿಯನ್ ಫಾರ್ಮಾ ನಿರ್ಮಿತ ಕಫ್ ಸಿರಪ್ನಲ್ಲಿಯೂ ಎಥಿಲಿನ್ ಗ್ಲೈಕೊಲ್ ಹಾಗೂ ಡಿಥಿಲಿನ್ ಗ್ಲೈಕೋಲ್ ಅಂಶಗಳು ಸ್ವೀಕಾರಾರ್ಹ ಮಿತಿಗಿಂತ ಅಧಿಕ ಪ್ರಮಾಣದಲ್ಲಿರುವುದು ತನಿಖೆಯಿಂದ ಪತ್ತೆಯಾಗಿತ್ತು. ಇದೀಗ ಭಾರತದ ಇನ್ನೊಂದು ಔಷಧಿ ಸಂಸ್ಥೆ ಉತ್ಪಾದಿಸಿರುವ ಕೆಮ್ಮಿನ ಸಿರಪ್ನ ಸೇವನೆಯಿಂದ ಉಜ್ಬೆಕಿಸ್ತಾನದಲ್ಲಿ ಮಕ್ಕಳ ಸಾವುಗಳು ಸಂಭವಿಸಿರುವುದು ಭಾರೀ ಆತಂಕಕಕ್ಕೆ ಕಾರಣವಾಗಿದೆ.







