ಉ.ಭಾರತದಲ್ಲಿ ದಟ್ಟಮಂಜು: ನೂರಕ್ಕೂ ಅಧಿಕ ವಿಮಾನಗಳ ಸಂಚಾರಕ್ಕೆ ವ್ಯತ್ಯಯ
ಹೊಸದಿಲ್ಲಿ, ಡಿ.28: ತೀವ್ರ ಶೀತಮಾರುತದಿಂದಾಗಿ ತತ್ತರಿಸಿರುವ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಮತ್ತೆ ದಟ್ಟ ಮಂಜು ಕವಿದಿದ್ದು,ಕಳೆದ ಮೂರು ದಿನಗಳಲ್ಲಿ ದಿಲ್ಲಿಯೊಂದರಲ್ಲಿಯೇ ನೂರಕ್ಕೂ ಅಧಿಕ ವಿಮಾನಗಳ ಸಂಚಾರಕ್ಕೆ ವ್ಯತ್ಯಯವಾಗಿತ್ತು.
ಮೂರು ದಿನಗಳ ಕಾಲ ಕೆಟ್ಟ ಹವಾಮಾನದಿಂದಾಗಿ ನೂರಕ್ಕೂ ಅಧಿಕ ವಿಮಾನಗಳು ವಿಳಂಬವಾಗಿ ಸಂಚರಿಸಿವೆ,ಕೆಲವು ಯಾನಗಳನ್ನು ಸಮೀಪದ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ವಷಾಂತ್ಯದ ರಜೆಗಳಿಂದಾಗಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ವಿಮಾನ ನಿಲ್ದಾಣಗಳ ಅಧಿಕಾರಿಗಳ ಹರಸಾಹಸದ ನಡುವೆ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟ ಮಂಜು ಕವಿದಿರುವುದು ಪ್ರಯಾಣಿಕರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಕಳೆದ ಕೆಲವು ದಿನಗಳಿಂದ ದೇಶದ ಉತ್ತರ ಭಾಗಗಳಲ್ಲಿ ಕ್ಷೀಣಗೊಂಡಿರುವ ಗೋಚರತೆ ಬುಧವಾರ ಮತ್ತೆ ವಿಮಾನ ಸಂಚಾರಗಳನ್ನು ಅಸ್ತವ್ಯಸ್ತಗೊಳಿಸಿದೆ.
ಕೆಲವು ವಿಮಾನಯಾನ ಸಂಸ್ಥೆಗಳು ಇನ್ನೂ ತಮ್ಮ ಸಿಎಟಿ-III ಪೂರಕ ಪೈಲಟ್ಗಳನ್ನು ನಿಯೋಜಿಸದಿರುವುದೂ ವಿಮಾನಗಳ ವಿಳಂಬಕ್ಕೆ ಇನ್ನೊಂದು ಕಾರಣವಾಗಿದೆ ಎಂದು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದರು. ಸಿಎಟಿ-III ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ವ್ಯವಸ್ಥೆಯು ಕಡಿಮೆ ಗೋಚರತೆಯಲ್ಲಿಯೂ ವಿಮಾನಗಳನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಲು ಅವಕಾಶವನ್ನು ಕಲ್ಪಿಸುತ್ತದೆ.







