ಮಹಿಳಾ ಟಿ-20 ವಿಶ್ವಕಪ್: ಭಾರತೀಯ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ
ಹೊಸದಿಲ್ಲಿ: ಫೆಬ್ರುವರಿಯಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ನಾಯಕಿಯಾಗಿದ್ದು, ಸ್ಮತಿ ಮಂದಾನಾ ಉಪನಾಯಕಿಯಾಗಿರುತ್ತಾರೆ.
ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿ 15 ಮಂದಿಯ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಫೆಬ್ರುವರಿ 10 ರಿಂದ 26ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ನಡೆಯುವ ತ್ರಿಕೋಣ ಸರಣಿಗೂ ತಂಡವನ್ನು ಆಯ್ಕೆ ಮಾಡಲಾಗಿದೆ.
2ನೇ ಗುಂಪಿನಲ್ಲಿರುವ ಭಾರತ ತಂಡ ಟಿ-20 ವಿಶ್ವಕಪ್ ಲೀಗ್ ಹಂತದ ಪಂದ್ಯಗಳಲ್ಲಿ ಫೆಬ್ರುವರಿ 12ರಂದು ಪಾಕಿಸ್ತಾನ ವಿರುದ್ಧ, 15ರಂದು ವೆಸ್ಟ್‌ಇಂಡೀಸ್ ವಿರುದ್ಧ, 18ರಂದು ಇಂಗ್ಲೆಂಡ್ ವಿರುದ್ಧ ಹಾಗೂ 20ರಂದು ಐರ್ಲೆಂಡ್ ವಿರುದ್ಧ ಸೆಣೆಸಲಿದೆ.
ಹಿರಿಯ ಆಟಗಾರ್ತಿ ಶಿಖಾ ಪಾಂಡೆ ಕೂಡಾ ತಂಡದಲ್ಲಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಭಾರತ ಪರ ಕೊನೆಯ ಪಂದ್ಯ ಆಡಿದ್ದ ಶಿಖಾ ಪಾಂಡೆಯವರನ್ನು ವಿವಾದಾತ್ಮಕವಾಗಿ ತಂಡದಿಂದ ಕೈಬಿಡಲಾಗಿತ್ತು. 33 ವರ್ಷ ವಯಸ್ಸಿನ ಪಾಂಡೆ ಬಾಲ್ ಸ್ವಿಂಗ್ ಮಾಡುವಲ್ಲಿ ನಿಸ್ಸೀಮರು. ಇವರು ಮೂರು ಟೆಸ್ಟ್, 55 ಏಕದಿನ ಹಾಗೂ 56 ಟಿ-20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 1-4 ಅಂತರದ ಸೋಲು ಅನುಭವಿಸಿದ ತಂಡದಲ್ಲಿದ್ದು, ನೀರಸ ಪ್ರದರ್ಶನ ನೀಡಿದ್ದ ಜೆಮಿಮಾ ರೋಡ್ರಿಗಸ್ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ್ದ ಎಡಗೈ ವೇಗಿ ಅಂಜಲಿ ಸರ್ವಾನಿ ಕೂಡಾ ತಂಡದಲ್ಲಿದ್ದಾರೆ. ರೇಣುಕಾ ಠಾಕೂರ್ ಮತ್ತು ಪೂಜಾ ವಸ್ತಾರ್‌ಕರ್ ತಂಡದಲ್ಲಿರುವ ಇತರ ವೇಗಿಗಳು. ಆಲ್‌ರೌಂಡರ್ ದೀಪ್ತಿ ಶರ್ಮಾ ಮತ್ತು ದೇವಿಕಾ ವೈದ್ಯ, ಸ್ಪಿನ್ನರ್‌ಗಳಾದ ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಸ್ಪಿನ್ ವಿಭಾಗ ನಿರ್ವಹಿಸಲಿದ್ದಾರೆ. 19ರ ವಯೋಮಿತಿಯ ತಂಡದಲ್ಲಿ ಈಗಾಗಲೇ ಶಫಾಲಿ ವರ್ಮಾ ಮತ್ತು ರೀಚಾ ಘೋಷ್ ದಕ್ಷಿಣ ಆಫ್ರಿಕಾದಲ್ಲಿದ್ದಾರೆ.
2023ರ ಜನವರಿ 19ರಿಂದ ಭಾರತ, ವೆಸ್ಟ್‌ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ತ್ರಿಕೋನ ಸರಣಿ ನಡೆಯಲಿದೆ.