ಹ್ಯಾಟ್ರಿಕ್ ವಿಶ್ವಕಪ್ ಗೆದ್ದರೂ ಅಂಧ ಕ್ರಿಕೆಟಿಗರಿಗೆ ಬೆಳಕಾಗದ ಸರಕಾರ!
ಬೆಂಬಲ, ಪ್ರೋತ್ಸಾಹವಿಲ್ಲದೆ ಕನ್ನಡಿಗ ಆಟಗಾರರ ಬದುಕು ಅತಂತ್ರ

ಐಸಿಸಿಗೆ ಸೇರ್ಪಡೆ ಯಾಕಿಲ್ಲ?
2012ರ ಟಿ-20 ವಿಶ್ವಕಪ್ನಲ್ಲಿ 9, 2017ರಲ್ಲಿ 10, 2022ರಲ್ಲಿ 6 ದೇಶಗಳು ಭಾಗವಹಿಸಿದ್ದವು. ಈ ಹಿನ್ನೆಲೆಯಲ್ಲಿ ಐಸಿಸಿ ಸದಸ್ಯತ್ವ ಪಡೆದ ರಾಷ್ಟ್ರಗಳಿಗೆ ‘ಅಂಧರ ಕ್ರಿಕೆಟ್’ಗೆ ಬೆಂಬಲಿಸುವಂತೆ ಹೇಳಿತ್ತು. ಬೆಂಬಲದ ಕೊರತೆ ಹಿನ್ನೆಲೆಯಲ್ಲಿ ಬಿಸಿಸಿಐ ನೋಂದಣಿಗಾಗಿ ಹಿಂದೇಟು ಹಾಕುತ್ತಿದೆ. ಐಸಿಸಿಗೆ ನೋಂದಣಿಯಾದರೆ ಆಟಗಾರರಿಗೆ ಸೌಲಭ್ಯ, ಉದ್ಯೋಗದ ಅವಕಾಶ ಸಿಗುತ್ತದೆ.
ಮಹಾಂತೇಶ್ ಜಿ. ಕಿವಡಸಣ್ಣವರ,
ಭಾರತೀಯ ಅಂಧರ ಕ್ರಿಕೆಟ್ ಅಸೋಸಿಯೇಶನ್(ಸಿಎಬಿಐ)ನ ಅಧ್ಯಕ್ಷ
ಬೆಂಗಳೂರು, ಡಿ.29: ಭಾರತದಲ್ಲಿ ‘ಕ್ರಿಕೆಟ್’ ಕುರಿತು ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ಹುಚ್ಚು ಹಿಡಿಸುವಷ್ಟು ಪ್ರೀತಿ. ಹಣದ ಹೊಳೆಯೇ ಹರಿಸುವ ಈ ಕ್ರೀಡೆ ನೋಡಲು, ಆಡಲು ಶುರುವಿಟ್ಟರೆ ಆಭಿಮಾನಿಗಳ ಸಂಭ್ರಮಕ್ಕೆ ಕೊನೆಯೇ ಇರುವುದಿಲ್ಲ. ಆದರೆ ಅಂಧರ ಕ್ರಿಕೆಟ್ ಇದಕ್ಕೆ ತದ್ವಿರುದ್ಧ. ಕ್ರಿಕೆಟ್ ಜಗತ್ತಲ್ಲಿಂದು ಕುತೂಹಲ ಮೂಡಿಸಿರುವ ಅಂಧರ ಟ್ವೆಂಟಿ-20 ವಿಶ್ವಕಪ್ ಇತ್ತೀಚೆಗಷ್ಟೇ ನಮ್ಮದೇ ರಾಜ್ಯದಲ್ಲಿ ಹೆಚ್ಚಿನ ಪ್ರಚಾರವಿಲ್ಲದೆ ಮುಗಿದು ಹೋಗಿದೆ. ಸಾಧನೆಯ ಶಿಖರವೇರುತ್ತಿರುವ ಅಂಧ ಕ್ರಿಕೆಟಿಗರನ್ನು ಈಗ ಗುರುತಿಸುವವರೂ ಇಲ್ಲದಂತಾಗಿದೆ. ಹಾಗೆಯೇ ಸತತ ಮೂರು ಬಾರಿ ಟ್ವೆಂಟಿ-20 ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾದಲ್ಲಿರುವ ಕನ್ನಡಿಗ ಆಟಗಾರರ ಜೀವನವು ಅತಂತ್ರ ಸ್ಥಿತಿಯಲ್ಲಿರುವ ಬಗ್ಗೆ ಸ್ವತಃ ಆಟಗಾರರೇ ತಮ್ಮ ನೋವು ಹಂಚಿಕೊಂಡಿದ್ದಾರೆ.
ಅಂಧರ ವಿಶ್ವಕಪ್ ಟ್ವೆಂಟಿ-20 ಫೈನಲ್ ಪಂದ್ಯವು ಡಿ.17ರಂದು ಚಿನ್ನಸ್ವಾಮಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಭಾರತ ತಂಡವು ಬಾಂಗ್ಲಾದೇಶವನ್ನು ಸೋಲಿಸುವುದರೊಂದಿಗೆ ಹ್ಯಾಟ್ರಿಕ್ ವಿಶ್ವಕಪ್ ಗೆದ್ದುಕೊಂಡು ವಿಶೇಷ ದಾಖಲೆ ಸೃಷ್ಟಿಸಿದೆ. ಇನ್ನು ಚಾಂಪಿಯನ್ ತಂಡದಲ್ಲಿ ಮೂವರು ಕನ್ನಡಿಗರು ಇದ್ದರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. 2012ರಿಂದ ವಿಶ್ವಕಪ್ ಆಡಿಕೊಂಡು ಬಂದಿರುವ ತಂಡದ ಮಾಜಿ ಉಪನಾಯಕ, ವಿಕೆಟ್ ಕೀಪರ್ ಆಗಿರುವ ಚೆನ್ನಪಟ್ಟಣದ 43 ವರ್ಷದ ಪ್ರಕಾಶ್ ಜಯರಾಮಯ್ಯ, ಚಿಕ್ಕಮಗಳೂರಿನ 24 ವರ್ಷದ ಸುನೀಲ್, ಗಂಗಾವತಿಯ 27 ವರ್ಷದ ಲೋಕೇಶ್ ಭಾರತವನ್ನು ಪ್ರತಿನಿಧಿಸಿದ ಕನ್ನಡಿಗರಾಗಿದ್ದಾರೆ. ಆದರೆ ಸರಕಾರವು ಇವರಿಗೆ ಯಾವುದೇ ಉದ್ಯೋಗ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡದಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ.
ಕಳೆದ 10 ವರ್ಷಗಳಿಂದ ಭಾರತ ತಂಡವು 2 ಏಕದಿನ, 3 ಟಿ-20, ಒಂದು ಏಶ್ಯನ್ ಕಪ್ ಗೆಲ್ಲುವುದರೊಂದಿಗೆ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ. ತಂಡದ ವಿಜಯಕ್ಕೆ ಕಾರಣರಾದ ಬಹುತೇಕ ಮಂದಿ ಕನ್ನಡಿಗ ಆಟಗಾರರು ಇಂದಿಗೂ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಹರ್ಯಾಣ, ಒಡಿಶಾ, ಕೇರಳದಂತಹ ರಾಜ್ಯದಲ್ಲಿ ಆಟಗಾರರಿಗೆ ಉತ್ತಮ ಸೌಲಭ್ಯ, ಉದ್ಯೋಗ ಲಭಿಸಿದರೂ ನಮ್ಮ ರಾಜ್ಯದಲ್ಲಿ ನಮ್ಮನ್ನು ಕೇಳುವವರೇ ಇಲ್ಲ ಎಂಬುದು ಬಹುತೇಕ ಕನ್ನಡಿಗ ಆಟಗಾರರ ಆರೋಪವಾಗಿದೆ. ಇವರಿಗೆ ಯಾವುದೇ ಆದಾಯವಿಲ್ಲದೇ ತಮ್ಮ ಕುಟುಂಬವನ್ನು ಸಾಗಿಸಲು ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ರಿಂದ ಶುರುವಾಗಿ ಇದುವರೆಗಿನ ಎಲ್ಲಾ ಸರಕಾರಕ್ಕೂ ಸರಕಾರಿ ಉದ್ಯೋಗ ನೀಡುವಂತೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಲಾಗುತ್ತಿದೆ ಎಂದು ಆಟಗಾರರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಫುಟ್ಬಾಲ್, ಕಬಡ್ಡಿಗೆ ಸಿಗುವ ಪ್ರಚಾರಗಳು ನಮಗೆ ಸಿಗುತ್ತಿಲ್ಲ, ನಮ್ಮ ಮೇಲೆ ಅನುಕಂಪ ತೋರಿಸಬೇಡಿ, ಅವಕಾಶ ಕೊಡಿ ಎಂದು ತಂಡದ ಆಟಗಾರರು ಅಳಲು ತೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅಂಧರ ಕ್ರಿಕೆಟ್ಗೆ ಎಲ್ಲಾ ಸ್ಪಂದನ ಹಾಗೂ ಆಟಗಾರರಿಗೆ ಸಿಗಬೇಕಾದ ಸೌಲಭ್ಯ ಲಭಿಸಲಿ ಎಂಬುದು ಆಭಿಮಾನಿಗಳ ಆಶಯ.
12 ಸಾವಿರಕ್ಕೆ ದುಡಿಯುತ್ತಿರುವ ಜಯರಾಮಯ್ಯ!
2012 ವಿಶ್ವಕಪ್ನಿಂದ ಆಡುತ್ತಾ ಬರುತ್ತಿರುವ ತಂಡದ ಹಿರಿಯ ಆಟಗಾರರಾಗಿರುವ ಪ್ರಕಾಶ್ ಜಯರಾಮಯ್ಯ ಅವರು ಗುತ್ತಿಗೆ ಆಧಾರದಲ್ಲಿ ಕೇವಲ 12 ಸಾವಿರ ರೂ. ವೇತನಕ್ಕೆ ದುಡಿಯುತ್ತಿದ್ದಾರೆ. ವಿಶ್ವಕಪ್ ಕಾರಣಕ್ಕೆ ಕೆಲಸಕ್ಕೆ ರಜೆ ಹಾಕಿರುವುದರಿಂದ 2 ತಿಂಗಳ ವೇತನವೇ ಸಿಕ್ಕಿಲ್ಲ. ಮನೆಯ ಜವಾಬ್ದಾರಿ ನನ್ನ ಮೇಲಿದೆ. ಮಗ ಮತ್ತು ಮಗಳ ವಿದ್ಯಾಭ್ಯಾಸಕ್ಕೂ ಕಷ್ಟದ ಪರಿಸ್ಥಿತಿ ಎದುರಾಗಿದೆ. ಮೂರು ವಿಶ್ವಕಪ್ ಜಯಿಸಿಕೊಟ್ಟ ನಮಗೆ ಇಲ್ಲಿನ ಸರಕಾರ ಸ್ಪಂದಿಸುತ್ತಿಲ್ಲ ಎಂದು ಜಯರಾಮಯ್ಯ ತಮ್ಮ ನೋವು ಹಂಚಿಕೊಂಡಿದ್ದಾರೆ. ವಿಶ್ವಕಪ್ ಗೆದ್ದ ತಂಡಕ್ಕೆ ಕೇವಲ 3 ಲಕ್ಷ ರೂ.ಬಹುಮಾನ!
ಈ ಬಾರಿಯ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ತಂಡಕ್ಕೆ ಕೇವಲ 3 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. ರನ್ನರ್ ಅಪ್ ತಂಡಕ್ಕೆ 1.5 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. ಇಷ್ಟು ಬಹುಮಾನ ಮೊತ್ತವನ್ನು ಸ್ಥಳೀಯ ಟೂರ್ನಮೆಂಟ್ಗಳಲ್ಲೂ ನೀಡುತ್ತಾರೆ. ಒಟ್ಟಿನಲ್ಲಿ ಅಂಧರ ವಿಶ್ವಕಪ್ ಕ್ರಿಕೆಟ್ಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎಂದು ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅನುಕಂಪ ಬೇಡ, ಅವಕಾಶ ನೀಡಿ’
ಅಂಧರು ಕ್ರಿಕೆಟ್ ವಿಶ್ವಕಪ್ ಆಡಲು ಬಹಳ ಸವಾಲುಗಳಿದ್ದವು. ಆದರೂ ಕಠಿಣ ಪರಿಶ್ರಮದಿಂದ ವಿಶ್ವಕಪ್ ನಮ್ಮ ದೇಶವೇ ಗೆದ್ದುಕೊಂಡಿದೆ. ಆದರೆ ಬೇರೆ ರಾಜ್ಯದಲ್ಲಿ ಸಿಗುವಂತಹ ಗೌರವ ನಮ್ಮ ರಾಜ್ಯದಲ್ಲಿ ಸಿಗುತ್ತಿಲ್ಲ ಎಂಬ ನೋವಿದೆ. ಎಲ್ಲಾ ಕ್ರೀಡೆಯಂತೆ ಅಂಧರ ಕ್ರಿಕೆಟ್ ಆಟಗಾರರಿಗೂ ಸ್ಥಾನಮಾನ, ಪ್ರಶಸ್ತಿ, ಪ್ರೋತ್ಸಾಹ ಸಿಗಬೇಕಾಗಿದೆ. ದೇಶದ ಕೀರ್ತಿಯನ್ನು ಬೆಳಗಿಸಿದ ಇವರಿಗೂ ತರಬೇತಿ, ಶಿಕ್ಷಣಕ್ಕೂ ಅವಕಾಶ ಸಿಗಲಿ. ಈಗಾಗಲೇ ಆಟಗಾರರಿಗೆ 25 ಲಕ್ಷ ರೂ. ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರ ಸರಕಾರ ನೀಡುವ 5 ಲಕ್ಷ ರೂ. ಮತ್ತಷ್ಟು ಹೆಚ್ಚಿಸಬೇಕೆಂಬುದು ನಮ್ಮ ಆಗ್ರಹ. ತಂಡಕ್ಕೆ ಪ್ರಾಯೋಜಕತ್ವ ನೀಡುವುದಕ್ಕೂ ಮುಕ್ತ ಅವಕಾಶವಿದೆ ಎನ್ನುತ್ತಾರೆ ಸಿಎಬಿಐ ಇದರ ಅಧ್ಯಕ್ಷ ಮಹಾಂತೇಶ್.







