ಮುಂಬೈ ಯಾರ ಅಪ್ಪನದೂ ಅಲ್ಲ...: ದೇವೇಂದ್ರ ಫಡ್ನವೀಸ್

ಮುಂಬೈ: ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಕರ್ನಾಟಕದ ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಮುಂಬೈ ನಮ್ಮ ರಾಜ್ಯಕ್ಕೆ ಸೇರಿದ್ದು. ಇದು ಯಾರ ಅಪ್ಪನದೂ ಅಲ್ಲ" ಎಂದು ಗುಡುಗಿದ್ದಾರೆ.
ಈ ಸಂಬಂಧ ಕರ್ನಾಟಕಕ್ಕೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗ ಪತ್ರ ಬರೆಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇಂಥ ಹೇಳಿಕೆ ವಿರುದ್ಧ ವಾಗ್ದಂಡನೆ ವಿಧಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುವುದಾಗಿಯೂ ಅವರು ಹೇಳಿದ್ದಾರೆ.
ಗಡಿ ವಿವಾದದ ಸಂಬಂಧ ಉಭಯ ರಾಜ್ಯಗಳ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಹಾರಾಷ್ಟ್ರ ವಿರುದ್ಧ ವಾಗ್ದಾಳಿ ನಡೆಸಿದ ಜೆ.ಸಿ.ಮಾಧುಸ್ವಾಮಿ, "ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಮನವಿ ಮಾಡಲು ಮಹಾರಾಷ್ಟ್ರ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದೇಶದಲ್ಲಿ ಅಂಥಾ ಎರಡರಿಂದ ಮೂರು ನಗರಗಳಿವೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಅವುಗಳಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಬಾಂಬೆ ಪ್ರೆಸಿಡೆನ್ಸಿಯಲ್ಲಿ ಅದು ಕೇಂದ್ರಾಡಳಿತ ಪ್ರದೇಶದಂತಿತ್ತು. ಆ ವ್ಯಕ್ತಿಗಳು ದೇಶಕ್ಕೆ ಒಳ್ಳೆಯದು ಬಯಸುವುದಾದರೆ, ಉದಾರತನ ಪ್ರದರ್ಶಿಸಿ, ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಿ" ಎಂದು ಚುಚ್ಚಿದ್ದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಫಡ್ನವೀಸ್, ರಾಜ್ಯದ ಭಾವನೆಗಳನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಿಳಿಸುವುದಾಗಿ ಹೇಳಿದರು. ಈ ವೇಳೆ, "ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು.. ಯಾರಪ್ಪನದೂ ಅಲ್ಲ" ಎಂದು ಫಡ್ನವೀಸ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಮುಂಬೈ ಮೇಳೆ ಯಾರೂ ಹಕ್ಕು ಪ್ರತಿಪಾದಿಸುವುದನ್ನು ತಾವು ಸಹಿಸುವುದಿಲ್ಲ ಎಂದೂ ಅವರು ಗುಡುಗಿದ್ದಾರೆ.







