ಮಂಗಳೂರು ವಿವಿಯಲ್ಲಿ 'ಆಗು ನೀ ಅನಿಕೇತನ' ಕಾರ್ಯಕ್ರಮ

ಕೊಣಾಜೆ: ಕುವೆಂಪು ಅವರ ಆಧ್ಯಾತ್ಮಿಕ, ಸಾಮಾಜಿಕ ಮತ್ತು ವೈಚಾರಿಕ ಚಿಂತನೆಗಳು ಇಂದಿಗೂ ಪ್ರಸ್ತುತ. ವರ್ತಮಾನದ ಕಣ್ಣಿನಿಂದ ಕುವೆಂಪು ಅವರ ಸಾಹಿತ್ಯದ ಮರು ಓದು ನಡೆಯಬೇಕು ಎಂದು ಮುಂಬಯಿ ವಿವಿಯ ವಿಶ್ರಾಂತ ಪ್ರಾಧ್ಯಪಕರಾದ ಪ್ರೊ.ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ಗುರುವಾರ ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಕೇಂದ್ರ ದ ವತಿಯಿಂದ ವಿಭಾಗದ ಸಭಾಂಗಣದಲ್ಲಿ ನಡೆದ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ 'ಆಗು ನೀ ಅನಿಕೇತನ' ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿವಿಗಳಲ್ಲಿ ಪ್ರಸಾರಾಂಗ ಇರಬೇಕೆಂಬ ಕಲ್ಪನೆ ಕುವೆಂಪು ಅವರದ್ದು. ಈಗ ಎಲ್ಲಾ ವಿವಿಗಳಲ್ಲೂ ಪ್ರಸಾರಾಂಗ ರೂಪುಗೊಂಡಿದೆ. ಕುವೆಂಪು ಅವರಿಗೆ ಕನ್ನಡ ಮಾಧ್ಯಮದ ಕುರಿತು ಅಪಾರ ಕಾಳಜಿಯಿತ್ತು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ವಿವಿಯ ಕುಲಪತಿಗಳಾದ ಪ್ರೊ.ಪಿ.ಎಸ್ ಯಡಪಡಿತ್ತಾಯ ಮಾತನಾಡಿ ವಿಶ್ವ ಮಾನವತೆಯ ಆಶಯವು ನಮ್ಮ ಸುತ್ತಮುತ್ತಲಿನವರನ್ನೂ ಒಳಗೊಂಡು ಮಾನವ ಧರ್ಮವನ್ನು ಪ್ರತಿಪಾದಿಸುವುದೇ ಆಗಿದೆ. ಕುವೆಂಪು ಅವರ ಕನ್ನಡಾಭಿಮಾನ ನಮಗೆಲ್ಲಾ ಆದರ್ಶವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಮಾತನಾಡಿ ಕುವೆಂಪು ಶ್ರೀಸಾಮಾನ್ಯನ ಬದುಕಿಗೂ ಘನತೆಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಸಮಾರಂಭದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಅಭಯ ಕುಮಾರ್, ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.
ಡಾ.ಯಶುಕುಮಾರ್ ಸ್ವಾಗತಿಸಿದರು.ಚಂದನಾ ಕೆ ಎಸ್ ವಂದಿಸಿದರು.ವಿದ್ಯಾರ್ಥಿನಿ ರಶ್ಮಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕುವೆಂಪು ಗೀತೆಗಳ ಗಾಯನ, ಕವಿತಾ ವಾಚನ, ವಿಶ್ವಮಾನವ ಸಂದೇಶವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.