ದೇವೇಗೌಡರ ಭದ್ರಕೋಟೆಯನ್ನು ಅಲ್ಲಾಡಿಸೋಕೆ ಯಾರಿಗೂ ಆಗಲ್ಲ: ಜೆಡಿಎಸ್ ಶಾಸಕ ಅನ್ನದಾನಿ
''ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯವರು ದಂಡೆತ್ತಿ ಬರಲಿ, ಅದಕ್ಕೆಲ್ಲ ಸೊಪ್ಪು ಹಾಕಲ್ಲ''

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಬಿಜೆಪಿಯವರು ಎಚ್‍ಡಿಕೆ ಅವರನ್ನು ನೆನಪಿಸಿಕೊಳ್ಳಬೇಕು. ಎಲ್ಲೋ ಇದ್ದವರನ್ನ ಅಧಿಕಾರಕ್ಕೆ ತಂದವರು ಅವರು. ಹಳೆ ಮೈಸೂರು ಭಾಗದಲ್ಲಿ ಯಾರೆ ದಂಡೆತ್ತಿ ಬರಲಿ, ರಾಮನಗರ, ಮಂಡ್ಯ ದೇವೇಗೌಡರ ಭದ್ರಕೋಟೆ. ಅದನ್ನು ಅಲ್ಲಾಡಿಸೋಕೆ ಯಾರಿಗೂ ಆಗಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದರು.
ಗುರುವಾರ ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಕ್ರೈಸ್ತರಾ? ಮುಸ್ಲಿಮರಾ? ನಾವು ಹಿಂದೂಗಳೇ, ಗೌಡರು ಹಿಂದೂಗಳೆ. ಬಿಜೆಪಿಯವರು ಏನು ಪದೇ ಪದೇ ಹಿಂದು ಎಂದೇ ಹೇಳೋದು ಎಂದು ಕಿಡಿಗಾರಿದರು.
ಸಂವಿಧಾನವನ್ನ ಯಥಾವತ್ ಅಳವಡಿಸಿಕೊಳ್ಳಬೇಕು.ಅದರಂತೆ ಆಡಳಿತ ನಡೆಸಬೇಕು. ಅಮೆರಿಕ ಕ್ರೈಸ್ತರ ದೇಶ, ದುಬೈ ಮುಸ್ಲಿಮರ ದೇಶ ಅಲ್ಲವೇ? ಅಲ್ಲೆಲ್ಲ ಹಿಂದುಗಳು ಇಲ್ಲವೇ? ಅವರ ಪರಿಸ್ಥಿತಿ ಏನಾಗಬೇಕು.ಮೊದಲು ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಕಿತ್ತು ಹಾಕುವ ಕೆಲಸ ಮಾಡಲಿ ಎಂದು ಅವರು ಹೇಳಿದರು.
ನಿಮ್ಮ ಕೆಲಸ ಮಾಡೋಕೆ ದಲಿತರು ಬೇಕು. ಕುಂಬಾರ, ಚಮ್ಮಾರರು ನಿಮಗೆ ಬೇಕು.ಅವರಿಗೆ ಮೊದಲು ಸಾಮಾಜಿಕ ನ್ಯಾಯ ಕೊಡಿ. ಬಿಜೆಪಿಯವರು ಯೋಗಿನಾದ್ರೂ ಕರೆತರಲಿ, ಜೋಗಿಯನ್ನಾದರೂ ಕರೆ ತರಲಿ. ಅದಕ್ಕೆಲ್ಲ ದೇವೇಗೌಡರು ಸೊಪ್ಪು ಹಾಕಲ್ಲ. ಇಲ್ಲಿರುವವರಿಂದಲೆ ಕಿತ್ತು ಹಾಕೋಕೆ ಆಗಲಿಲ್ಲ. ಇನ್ನೂ ಅಲ್ಲಿ ಬಂದು ಏನು ಅಲ್ಲಾಡಿಸುತ್ತಾರೆ ಎಂದು ಅನ್ನದಾನಿ ಕಿಡಿಗಾರಿದರು.







