ಮಂಗಳೂರು ಕುಟುಂಬ ವೈದ್ಯರ ಸಂಘದಿಂದ ವೈದ್ಯಕೀಯ ಕಮ್ಮಟ

ಮಂಗಳೂರು: ಮಂಗಳೂರು ಕುಟುಂಬ ವೈದ್ಯರ ಸಂಘದ ವತಿಯಿಂದ ಕ್ಯಾನ್ಸರ್ ಕುರಿತ ವೈದ್ಯಕೀಯ ಕಮ್ಮಟವು ನಗರದಲ್ಲಿ ನಡೆಯಿತು.
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಕುಟುಂಬ ವೈದ್ಯರ ವಿಭಾಗದ ಅಧ್ಯಕ್ಷ ಡಾ.ಎಂ. ಅಣ್ಣಯ್ಯ ಕುಲಾಲ ಉಳ್ತೂರು ಮಾತನಾಡಿ ದೇಶದ ಅರೋಗ್ಯ ವ್ಯವಸ್ಥೆಯ ಕೊಂಡಿ ಹಾಗೂ ನೆಲೆಗಟ್ಟು ಕುಟುಂಬ ವೈದ್ಯಕೀಯ ಪದ್ಧತಿಯಾಗಿದೆ. ಹಳ್ಳಿಗಳಿಂದಲೇ ತುಂಬಿರುವ ಭಾರತದಲ್ಲಿ ಪರಿಣಾಮಕಾರಿ ಅರೋಗ್ಯ ಸೇವೆ ಕೊಡಬೇಕಾದರೆ ಪ್ರಾಥಮಿಕ ಅರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್ ಜೊತೆಗೆ ಖಾಸಗಿ ಕುಟುಂಬ ವೈದ್ಯರ ಸೇವೆಗೆ ಸರಕಾರ ಒತ್ತು ಕೊಟ್ಟು ಅಲೋಪಥಿ ವೈದ್ಯರನ್ನು ಮನಒಲಿಸಿ ಅವರಿಗೆ ಸರ್ವ ಸವಲತ್ತು ಕೊಟ್ಟು ಕುಟುಂಬ ವೈದ್ಯ ಪದ್ಧತಿಯನ್ನ ಉಳಿಸಬೇಕು ಎಂದರು.
ದೇಶದ 650 ಮೆಡಿಕಲ್ ಕಾಲೇಜುಗಳಿಂದ ಪ್ರತಿವರ್ಷ ಹೊರಬರುವ ಒಂದು ಲಕ್ಷ ವೈದ್ಯರು ನೇರವಾಗಿ ಉನ್ನತ ಶಿಕ್ಷಣಕ್ಕೆ ಹೋಗುವ ಈಗಿನ ಪರಿಸ್ಥಿತಿಯನ್ನ ಬದಲಿಸಿ ಒಂದಷ್ಟು ಮಂದಿ ಕುಟುಂಬ ವೈದ್ಯ ಪದ್ದತಿಗೆ ಬರುವಂತೆ ಮಾಡಿದರೆ ಮಾತ್ರ ಹಳ್ಳಿಗಳಲ್ಲಿ ಸೂಕ್ತ ಅರೋಗ್ಯ ಸೇವೆ ಸಿಗುತ್ತದೆ. ಇಲ್ಲದಿದ್ದರೆ ಹಳ್ಳಿಗೊಂದು, ಪೇಟೆಗೊಂದು ರೀತಿಯ ಅರೋಗ್ಯ ಸೇವೆಯ ತಾರತಮ್ಯವಾಗಿ ಜನರು ರೊಚ್ಚಿಗೇಳುವ ಸಾಧ್ಯತೆ ಇದೆ ಎಂದು ಡಾ. ಅಣ್ಣಯ್ಯ ಕುಲಾಲ್ ಅಭಿಪ್ರಾಯಪಟ್ಟರು. ಕಾರ್ಯದರ್ಶಿ ಡಾ. ವಿವೇಕಾನಂದ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು.







