ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಅಳವಡಿಕೆಯಿಂದ ಸಂಘರ್ಷದ ವಾತಾವರಣವನ್ನು ನಿವಾರಿಸಲು ಸಾಧ್ಯ: ದ.ಕ. ಜಿಲ್ಲಾಧಿಕಾರ

ಮಂಗಳೂರು: ಪ್ರತಿಯೊಬ್ಬರು ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಇವತ್ತಿನ ದಿನಗಳಲ್ಲಿ ನಮ್ಮ ಲ್ಲಿ ಜಾತಿ, ಮತದ ಹೆಸರಿನಲ್ಲಿ ಕಂಡು ಬರುತ್ತಿರುವ ಸಂಘರ್ಷದ ವಾತಾವರಣವನ್ನು ನಿವಾರಿಸಲು ಸಾಧ್ಯ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೇಳಿದ್ದಾರೆ.
ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಗುರುವಾರ ನಗರದ ಬಲ್ಮಠದಲ್ಲಿರುವ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಬಹುತೇಕ ಮಂದಿ ಜನ್ಮದಿನವನ್ನು ಅವರ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಆದರೆ ಕುವೆಂಪು ಜನ್ಮದಿನವನ್ನು ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಅವರೊಬ್ಬ ಜಾತಿಮತ , ಪಂಥ , ಧರ್ಮ ಪ್ರಾದೇಶಿಕತೆ ಎಲ್ಲವನ್ನು ಮೀರಿ ಬೆಳೆದ ಏಕೈಕ ಕವಿಯಾಗಿದ್ದಾರೆ ಎನ್ನುವುದು ನಮ್ಮ ಹೆಮ್ಮೆ ಎಂದರು.
ಶಾಂತಿ, ಸಹೋದರತೆಯನ್ನು ಜಗತ್ತಿಗೆ ಸಾರಿದ ಕವಿ ಕುವೆಂಪು .ಕನ್ನಡ ಸಾಹಿತಿಯಾಗಿ ವಿಶ್ವಮಟ್ಟಕ್ಕೇರಿದ್ದ ಅವರು ಎಲ್ಲೂ ತಮ್ಮ ಜಾತಿಯ ಪ್ರಭಾವವನ್ನು ಬಳಸಲಿಲ್ಲ. ಕನ್ನಡ ಸಂಸ್ಕೃತ, ಇಂಗ್ಲಿಷ್ ನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದರು .ಅವರು ಕನ್ನಡ, ಸಂಸ್ಕೃತದಲ್ಲಿ ರಚಿಸಿದ ಕೃತಿಗಳೆಲ್ಲ ಇಂಗ್ಲಿಷ್ಗೆ ಅನುವಾದವಾಗುತ್ತಿದ್ದರೆ ಅವರಿಗೆ ನೊಬೆಲ್ ಪ್ರಶಸ್ತಿ ಸಿಗುತಿತ್ತು. ಇಂತಹ ಅತ್ಯುನ್ನತ ಗೌರವ ಪಡೆದ ಕನ್ನಡದ ಮೊದಲ ಸಾಹಿತಿಯಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಯಾವ ರೀತಿ ಇರಬೇಕು , ಹಿರಿಯರನ್ನು ಯಾವ ರೀತಿ ಗೌರವಿಸಬೇಕು ಎನ್ನುವುದನ್ನು ಕುವೆಂಪು ಕಲಿಸಿದರು. ಕುವೆಂಪು ಅವರ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಸಾಹಿತಿ ಟಿ.ಎ.ಎನ್ .ಖಂಡಿಗೆ ವಿಶ್ವ ಮಾನವ ದಿನಾಚರಣೆ ಅಂಗವಾಗಿ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ,ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ ಉಪಸ್ಥಿತರಿದ್ದರು.
