ಕುವೆಂಪು ಪ್ರಪಂಚವನ್ನು ಮಾನವೀಯವಾಗಿ ಕಂಡವರು-ಗಿರೀಶ್ ನಂದನ್
ಪುತ್ತೂರು: ವಿಶ್ವ ಮಾನವ ದಿನಾಚರಣೆ

ಪುತ್ತೂರು: ರಾಷ್ಟ್ರಕವಿ ಕುವೆಂಪು ಅವರು ದೂರದೃಷ್ಟಿಯನ್ನು ಹೊಂದಿದವರಾಗಿದ್ದು, ಪ್ರಪಂಚವನ್ನೇ ಮಾನವೀಯವಾಗಿ ಕಂಡವರು. ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಯನ್ನು ಮರು ನೆನಪಿಸಿಕೊಳ್ಳುವುದು ಅವರು ಜಯಂತಿ ಆಚರಣೆಯ ಉದ್ದೇಶವಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಹೇಳಿದರು.
ಅವರು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಗುರುವಾರ ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಮಾನವ ದಿನಾಚರಣೆ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯಲ್ಲಿ ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡಿದರು. ಜಯಂತಿ ಆಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ಸಮಾಜಕ್ಕೆ, ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂದೇಶದ ಪಾಲನೆ ಮಾಡುವ ಮೂಲಕ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಜಯಂತಿ ಆಚರಣೆ ಮಾಡಲಾಗುತ್ತದೆ. ದೂರದೃಷ್ಟಿವುಳ್ಳ ಮಹಾನ್ ವ್ಯಕ್ತಿ, ವಿಶ್ವಮಾನವನಾಗಿ ಗುರುತಿಸಿಕೊಂಡಿರುವ ಕುಂವೆಂಪು ಅವರ ಸಂದೇಶ ಆದರ್ಶವಾಗಿದೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ಕನ್ನಡ ಶ್ರೇಷ್ಠ ಕವಿಯಾಗಿರುವ ಕುಂವೆಂಪು ಅವರ ಸಾಹಿತ್ಯದ ಪಯಣ ಆಂಗ್ಲ ಭಾಷೆಯಿಂದ ಆರಂಭಗೊಂಡಿತ್ತು. ಬಳಿಕ ಪರಿವರ್ತನಾ ಘಟ್ಟಕ್ಕೆ ತಲುಪಿ ಕನ್ನಡದ ಮೇರುಕವಿಯಾಗಿ ಸಾಹಿತ್ಯ ಲೋಕಕ್ಕೆ ಪ್ರಭಾವ ಬೀರುವ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ನಿಸರ್ಗಪ್ರಿಯ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಗ್ರೇಡ್-2 ತಹಸೀಲ್ದಾರ್ ಲೋಕೇಶ್. ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಪಂ ಕಚೇರಿಯ ಸಿಬ್ಬಂದಿ ದಯಾನಂದ ಸ್ವಾಗತಿಸಿ, ವಂದಿಸಿದರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.