ಇ-ಬೈಕ್ ಟ್ಯಾಕ್ಸಿ, ವೈಟ್ ಬೋರ್ಡ್ ಟ್ಯಾಕ್ಸಿಗಳ ಅನುಮತಿ ಹಿಂಪಡೆಯಲು ಒತ್ತಾಯಿಸಿ ಆಟೋ ಚಾಲಕರ ಮುಷ್ಕರ
ವಿಧಾನಸೌಧ ಮುತ್ತಿಗೆಗೆ ಯತ್ನ, ಹಲವರು ಪೊಲೀಸ್ ವಶಕ್ಕೆ

ಬೆಂಗಳೂರು, ಡಿ.29: ಇ-ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳಿಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರ ಒಕ್ಕೂಟದಿಂದ ಸಾರಿಗೆ ಇಲಾಖೆಯ ವಿರುದ್ಧ ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಮುಷ್ಕರ ನಡೆಸಲಾಯಿತು.
21 ಆಟೋ ಚಾಲಕ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದಿಂದ ಸುಮಾರು 10 ಸಾವಿರ ಜನರು ಪ್ರತಿಭಟನೆಯಲ್ಲಿ ಭಾಗಿವಹಿಸಿದ್ದು, ಆಟೋ ರ್ಯಾಲಿ ಮೂಲಕ ಫ್ರೀಡಂ ಪಾರ್ಕ್‍ನಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದು ಕೊಂಡರು.
ಪ್ರತಿಭಟನೆ ವೇಳೆ ಮಾತನಾಡಿದ ಬೆಂಗಳೂರು ಆಟೋ ಚಾಲಕರ ಮಾಲಕರ ಸಂಘದ ಸಂಚಾಲಕ ಮಂಜುನಾಥ್, ಎರಡು ಸಾವಿರ ಆಟೋ ಡ್ರೈವರ್ ಳು ಪೋಸ್ಟ್ ಮೂಲಕ ಪ್ರಧಾನಮಂತ್ರಿಗೆ ಮನವಿಯನ್ನು ಕಳುಹಿಸಲಿದ್ದೇವೆ. ಸರಕಾರ ಕೂಡಲೇ ಇ-ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರ್ಯಾಪಿಡೋ ಆಟೋದಿಂದ ಆಟೋ ಚಾಲಕರ ಆದಾಯ ಕುಸಿದಿದ್ದು, ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು. ಆಗ ಬೆಂಗಳೂರಲ್ಲಿ ಒಂದು ಆಟೋ ಕೂಡ ರಸ್ತೆಗಿಳಿಯುವುದಿಲ್ಲ. ಉಪವಾಸ ಸತ್ಯಾಗ್ರಹಕ್ಕೆ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
► ಮುಷ್ಕರಕ್ಕೆ ರಾಮಲಿಂಗಾರೆಡ್ಡಿ ಬೆಂಬಲ
ಆಟೋ ಚಾಲಕರ ಮುಷ್ಕರ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಭೇಟಿ ನೀಡಿ ಚಾಲಕರನ್ನು ಬೆಂಬಲಿಸಿ ಮಾತನಾಡಿದ ಅವರು, ಸರಕಾರ ಕೂಡಲೇ ಆಟೋ ಚಾಲಕರ ನೋವುಗಳನ್ನು ಆಲಿಸಿ ಬಗೆಹರಿಸುವ ಕೆಲಸಕ್ಕೆ ಮುಂದಾಗಬೇಕು. ಬೆಂಗಳೂರಿನಲ್ಲಿ ಆಟೋ ಚಾಲಕರ ಪರಿಶ್ರಮದಿಂದ ನಾಗರಿಕರ ಸಂಚಾರ ತೊಂದರೆಗಳು ಕ್ಷೀಣಿಸಿವೆ. ನೂತನ ಇ-ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ತರುವ ಮೂಲಕ ಸರಕಾರ ಆಟೋ ಚಾಲಕರ ಕುಟುಂಬಕ್ಕೆ ಕಲ್ಲು ಹಾಕಿದೆ. ಕೂಡಲೇ ಅನುಮತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.









