8,001ಕೋಟಿ ರೂ.ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತಿಗೆ ವಿಧಾನಸಭೆಯಲ್ಲಿ ಅಂಗೀಕಾರ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ರಾಜ್ಯದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 1396.27 ಕೋಟಿರೂ. ಸೇರಿದಂತೆ ಒಟ್ಟು 8001 ಕೋಟಿ ರೂ.ಮೊತ್ತದ 2022-23ನೇ ಸಾಲಿನ ಪೂರಕ ಅಂದಾಜುಗಳ ಎರಡನೆ ಕಂತಿಗೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ಲಭಿಸಿತು.
ಪೂರಕ ಅಂದಾಜನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಸಕ್ತ ಸಾಲಿನ 2.71 ಲಕ್ಷಕೋಟಿ ರೂ.ಗಳ ಬಜೆಟ್ ಗಾತ್ರದ ಶೇ.8.38ರಷ್ಟಿರುವ ಎರಡನೆ ಕಂತಿನ ಪೂರಕ ಅಂದಾಜುಗಳು ಇದಾಗಿದೆ. ಇದರಲ್ಲಿ ವಿದ್ಯುತ್ ವಲಯಕ್ಕೆ 500 ಕೋಟಿರೂ., ಜಲಧಾರೆಗೆ 200 ಕೋಟಿರೂ., ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ಹಾಸ್ಟೇಲುಗಳ ಸ್ಥಾಪನೆಗೆ 200 ಕೋಟಿರೂ., ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 200 ಕೋಟಿರೂ. ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ 300 ಕೋಟಿರೂ.ವೆಚ್ಚವೂ ಸೇರಿಒಟ್ಟು 8001 ಕೋಟಿ ರೂ.ಗಳ ಪೂರಕ ಅಂದಾಜಿನ ವಿವಿಧ ಬಾಬ್ತುಗಳನ್ನು ವಿವರಿಸಿದರು.
ಕೇಂದ್ರ ಸರಕಾರದಿಂದ 10,550 ಕೋಟಿರೂ.ಜಿಎಸ್‍ಟಿ ಪಾಲು ಬಿಡುಗಡೆಯಾಗಿದೆ. 3399 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಉದ್ದೇಶಿಸಲಾಗಿದ್ದು, 1700 ಕೋಟಿರೂ. ಬಿಡುಗಡೆ ಮಾಡಲಾಗಿದೆ. ರಾಜ್ಯವು ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲಿಯೆ ಎರಡನೆ ಸ್ಥಾನದಲ್ಲಿದೆ.ತೆರಿಗೆ ಸಂಗ್ರಹ ಸಾಮರ್ಥ್ಯವು ಹೆಚ್ಚಳವಾಗಿದೆ. ವಾಣಿಜ್ಯ ತೆರಿಗೆ ಮೂಲಕ 79,010 ಕೋಟಿರೂ.ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸದನದ ಗಮನಕ್ಕೆ ತಂದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸದಸ್ಯ ಕೃಷ್ಣ ಭೈರೇಗೌಡ, ರಾಜ್ಯದ ಹಣಕಾಸು ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆಎಂದು ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿಯು ಡಿಸೆಂಬರ್ ನಲ್ಲಿ ವರದಿ ನೀಡಿದೆ. ಆರ್‍ಬಿಐ ಜೂನ್‍ನಲ್ಲಿ ಕೊಟ್ಟ ವರದಿಯಲ್ಲಿ ರಾಜ್ಯಗಳ ಹಣಕಾಸು ಪರಿಸ್ಥಿತಿ ಬಿಗಡಾಯಿಸುತ್ತಿರುವುದರ ಬಗ್ಗೆ ಗಮನ ಸೆಳೆದಿದೆ ಎಂದರು.
ನಮಗೆ ಬರುವಒಟ್ಟುಆದಾಯದಲ್ಲಿ ಶೇ.14ರಷ್ಟು ಬಡ್ಡಿ ಪಾವತಿಗೆ ಹೋಗುತ್ತಿದೆ.ಆದರೆ, ಛತ್ತೀಸ್‍ಗಡದಲ್ಲಿ ಶೇ.8, ಮಹಾರಾಷ್ಟ್ರ ಶೇ.11.5, ಒಡಿಸ್ಸಾ ಶೇ.4.3ರಷ್ಟು ಮಾತ್ರ ಬಡ್ಡಿ ಪಾವತಿಗೆ ಹೋಗುತ್ತಿದೆ.ಕರ್ನಾಟಕದಲ್ಲಿ ಈ ವರ್ಷ 14,178 ಕೋಟಿ ಸಾಲ ಅಸಲು ಮರುಪಾವತಿ ಇದೆ.ಅದೇ ಬಡ್ಡಿ ಮರುಪಾವತಿ 29,397 ಕೋಟಿರೂ. ಇದೆ ಎರಡು ಸೇರಿಸಿದರೆ ಈ ವರ್ಷ 43,575 ಕೋಟಿರೂ.ಸಾಲ ಮತ್ತು ಬಡ್ಡಿ ಮರು ಪಾವತಿಗೆ ಖರ್ಚು ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
2023-24ನೆ ಸಾಲಿಗೆ ಬಡ್ಡಿ ಪಾವತಿ 35,091 ಕೋಟಿರೂ., 2024-25ಕ್ಕೆ 38,629 ಕೋಟಿರೂ.ಆಗಲಿದೆ. ಅಸಲು ಮರುಪಾವತಿ ಸಿಎಜಿ ಕೊಟ್ಟಿರುವ ಮಾಹಿತಿ ಪ್ರಕಾರ 30 ಸಾವಿರ ಕೋಟಿರೂ. ಆಗಲಿದೆ. ನಮ್ಮ ಸರಕಾರದ ಅವಧಿಯಲ್ಲಿ 1.16 ಲಕ್ಷ ಕೋಟಿರೂ.ಸಾಲ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ 2.40 ಲಕ್ಷ ಕೋಟಿರೂ. ಇದ್ದ ಸಾಲ ಬರುವ ಮಾರ್ಚ್ ನಲ್ಲಿ 5.40 ಲಕ್ಷ ಕೋಟಿರೂ.ಆಗುವ ಸಾಧ್ಯತೆಯಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಕಳೆದ ವರ್ಷ 72 ಸಾವಿರ ಕೋಟಿ ರೂ.ಸಾಲ ಮಾಡಲು ಸದನ ಅವಕಾಶ ಕೊಟ್ಟಿದೆ.ಆದರೆ ನಾನು 63 ಸಾವಿರ ಕೋಟಿ ರೂ.ಮಿತಿ ಮೀರಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಆರ್ಥಿಕ ಇಲಾಖೆ ದಾಖಲೆಗಳ ಪ್ರಕಾರ ರಾಜ್ಯ ಸರಕಾರ 80,633 ಕೋಟಿ ರೂ. ಪಡೆದಂತಿದೆ ಎಂದು ಕೃಷ್ಣ ಭೈರೇಗೌಡ ಆರೋಪಿಸಿದರು.
ಇದಕ್ಕೆ ಸ್ಪಷ್ಟನೆ ನಿಡಿದ ಮುಖ್ಯಮಂತ್ರಿ, ಕೇಂದ್ರ ಸರಕಾರವು ಜಿಎಸ್ಟಿ ಮೇಲೆ ಸಾಲದ ರೂಪದಲ್ಲಿ ಕೊಟ್ಟ ಹಣವೂ ನಮ್ಮರಾಜ್ಯದ ಲೆಕ್ಕದಲ್ಲಿ ಸಾಲದ ರೂಪವಾಗಿ ಸೇರಿದೆ. ಆದುದರಿಂದ, ಈ ಮೊತ್ತ ಹೆಚ್ಚಾಗಿರುವಂತೆ ಕಾಣುತ್ತಿದೆಎಂದರು.
ಸಲಹೆಗಳು: ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸರಕಾರ 1300 ಕೋಟಿ ರೂ.ಗಳಿಗಿಂತ ಅಧಿಕ ಮೊತ್ತವನ್ನು ನೀಡುವುದಾಗಿ ತಿಳಿಸಿದೆ. ಆದರೆ, ಕೇಂದ್ರ ಸರಕಾರದಿಂದ ಬರಬೇಕಿರುವ ಪಾಲು ಬಿಡುಗಡೆಯಾಗಿಲ್ಲಅದನ್ನುಆದಷ್ಟು ಬೇಗ ಪಡೆಯಲು ಪ್ರಯತ್ನಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.
ಅಲ್ಲದೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ನಿಯಮಗಳು ಪರಿಷ್ಕರಣೆಆಗಿಲ್ಲ. ಅದನ್ನು ಪರಿಷ್ಕರಿಸುವಂತೆಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು.ಇಲ್ಲದಿದ್ದರೆ, ಈಗ ನಮಗೆ ಬರುತ್ತಿರುವ ಪಾಲು ತುಂಬಾ ಕಡಿಮೆ ಇದೆ, ಪರಿಷ್ಕರಣೆ ಆಗದಿದ್ದರೆ ಮತ್ತಷ್ಟು ಕಡಿಮೆ ಆಗಬಹುದು.ರಾಜ್ಯದ ಹಿತದೃಷ್ಟಿಯಿಂದ ನಮಗೆ ನ್ಯಾಯಯುತವಾಗಿ ಬರಬೇಕಿರುವ ತೆರಿಗೆ ಪಾಲನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆಯ ಸೆಕ್ಷನ್ 7 ಡಿ ಅಡಿಯಲ್ಲಿ ವೆಚ್ಚ ಮಾಡಿರುವ ಬಗ್ಗೆ ಶ್ವೇತಪತ್ರ ಮಂಡಿಸಿ. ಅಲ್ಲದೆ, ಈ ಸೆಕ್ಷನ್‍ಅನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ಸಾಧ್ಯವಾದರೆ, ಈ ಸೆಕ್ಷನ್‍ಗೆ ತಿದ್ದುಪಡಿ ತರುವುದು ಉತ್ತಮ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.







