‘ನ್ಯಾಯವಾದಿಗಳು ವಕಾಲತ್ತಿಗೆ ತಂತ್ರಜ್ಞಾನದ ನೆರವು ಪಡೆದುಕೊಳ್ಳಿ’: ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಪಿ.ಎಸ್.ಯೆರೂರ್ ಕ

ಉಡುಪಿ: ನ್ಯಾಯವಾದಿಗಳು ತಂತ್ರಜ್ಞಾನದ ಉಪಯೋಗ ಪಡೆದುಕೊಂಡು ಸೂಕ್ತ ರೀತಿಯಲ್ಲಿ ವಕಾಲತ್ತು ಮಂಡಿಸಬೇಕು ಎಂದು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಹಾಗು ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ತಿಳಿಸಿದ್ದಾರೆ.
ಗುರುವಾರ ಉಡುಪಿ ವಕೀಲರ ಸಂಘಕ್ಕೆ ಭೇಟಿ ನೀಡಿ ಅವರು ಮಾತನಾಡುತಿದ್ದರು.
ಕೌಟುಂಬಿಕ ವ್ಯಾಜ್ಯ, ಕ್ರಿಮಿನಲ್ ಪ್ರಕರಣ ಸಹಿತ ನ್ಯಾಯವಾದಿಗಳು ಸಾಕಷ್ಟು ವಿಚಾರಗಳ ಬಗ್ಗೆ ಗಮನಹರಿಸಬೇಕು. ಮುಖ್ಯವಾಗಿ ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಿ ಕಕ್ಷಿದಾರರಿಗೆ ನ್ಯಾಾಯ ಒದಗಿಸುವ ಕೆಲಸವಾಗಬೇಕು ಎಂದವರು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಯಾದ ಪ್ರದೀಪ್ ಸಿಂಗ್ ಯೆರೂರ್ ಅವರನ್ನು ಉಡುಪಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಧೀಶ ದಿನೇಶ್ ಹೆಗ್ಡೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಉಪಸ್ಥಿತರಿದ್ದರು.
ನ್ಯಾಯವಾದಿ ರೂಪಶ್ರೀ ಪ್ರಾರ್ಥಿಸಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಬಿ ಸ್ವಾಗತಿಸಿದರು. ವಕೀಲರ ಸಂಘದ ಪ್ರ.ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿ, ಉಡುಪಿ ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯ್ಕುಮಾರ್ ಶೆಟ್ಟಿ ನಿರೂಪಿಸಿದರು.








