ವಿದ್ಯುತ್ ಬಿಲ್ ತಪ್ಪಾಗಿದೆ ಎಂದು ಪ್ರತಿ ಮನೆಗಳಿಂದ ಹಳೆ ಬಾಕಿ ವಸೂಲಿ: ಮೆಸ್ಕಾಂ ವಿರುದ್ಧ ಆರೋಪ..!
ಕುಂದಾಪುರ: ಮೆಸ್ಕಾಂ ಮಾಡಿದ ತಪ್ಪಿಗೆ ವಿದ್ಯುತ್ ಗ್ರಾಹಕರು ಸಮಸ್ಯೆ ಅನುಭವಿಸಬೇಕಾದ ಘಟನೆಯೊಂದು ಕುಂದಾಪುರದ ಕೋಡಿ ಭಾಗದಲ್ಲಿ ನಡೆದಿದೆ.
ತಪ್ಪಾಗಿ ಬಿಲ್ ಕಳುಹಿಸಿ ಕಟ್ಟಿಸಿಕೊಂಡ ಇಲಾಖೆ, ಈಗ ಏಕಾಏಕಿ ನಾವು ತಪ್ಪಾಗಿ ಬಿಲ್ ನೀಡಿದ್ದೇವೆ ಹಳೆ ಬಾಕಿ ಪಾವತಿಸಿ ಎಂದು ಗ್ರಾಹಕರಿಂದ ಸಾವಿರಾರು ರೂ. ಕಟ್ಟಿಸಿಕೊಳ್ಳುತ್ತಿದೆ. ಅದೂ 700ಕ್ಕೂ ಅಧಿಕ ಗ್ರಾಹಕರಿಂದ ಸುಮಾರು 16.5 ಲಕ್ಷ ರೂ.ಗಳನ್ನು. ವಿದ್ಯುತ್ ಇಲಾಖೆ ಮೊದಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಗ್ರಾಹಕರಿಗೆ ವಿದ್ಯುತ್ ಬಳಕೆಗೆ ಸಮಾನ ದರ ವಿಧಿಸುತ್ತಿತ್ತು. ದಶಕಗಳ ಹಿಂದೆ ಈ ಪದ್ಧತಿಗೆ ತಿಲಾಂಜಲಿ ಇಟ್ಟು ಸಂಸ್ಥೆಗೆ ಲಾಭ ಮಾಡಿಕೊಡಬೇಕೆಂಬ ಏಕೈಕ ಉದ್ದೇಶದಿಂದ, ಗ್ರಾಮಾಂತರ ಹಾಗೂ ನಗರ ಪ್ರದೇಶಕ್ಕೆ ಒಂದೇ ವಿದ್ಯುತ್ ನೀಡುವುದಾದರೂ ನಗರದಲ್ಲಿ ವಿದ್ಯುತ್ ಬಳಸುವ ಗ್ರಾಹಕರಿಗೆ ಅಧಿಕ ದರ ಎಂಬ ವಸೂಲಿ ಕ್ರಮ ಶುರುವಿಟ್ಟುಕೊಂಡಿತು. ನಗರದ ವಿದ್ಯುತ್ ಬಿಲ್ಲು ಹಾಗೂ ಗ್ರಾಮಾಂತರದ ಬಿಲ್ಲಿಗೂ ತಾರತಮ್ಯ ಮಾಡತೊಡಗಿತು.
ಏನಾಗಿದೆ: ಕುಂದಾಪುರ ಪುರಸಭೆ ರಚನೆಯಾಗಿ ಐದು ದಶಕವಾಗಿದ್ದು ಕೋಡಿ ಪ್ರದೇಶವು ಕುಂದಾಪುರ ಪುರಸಭೆ ವ್ಯಾಪ್ತಿಗೆ ಸೇರುತ್ತದೆ. ವರ್ಷಗಳ ಹಿಂದೆ ಕೋಡಿ ಪ್ರದೇಶಕ್ಕೆ ವಿದ್ಯುತ್ ಸರಬರಾಜಿಗೆ ಪ್ರತ್ಯೇಕ ಫೀಡರ್ ಕೂಡಾ ಅಳವಡಿಸಲಾಗಿದೆ.ಇದೇನೇ ಇದ್ದರೂ ಕೋಡಿ ಪ್ರದೇಶಕ್ಕೆ ಮೆಸ್ಕಾಂ ವತಿಯಿಂದ ಗ್ರಾಮಾಂತರದ ಬಳಕೆದಾರರ ಬಿಲ್ ನೀಡಲಾಗುತ್ತಿತ್ತು. ಅಸಲಿಗೆ ಕೋಡಿ ಪುರಸಭೆ ವ್ಯಾಪ್ತಿಯಾದ ಕಾರಣ ನಗರದ ಗ್ರಾಹಕರ ಬಿಲ್ ಹಾಕಬೇಕಿತ್ತು. ಈಗ ಲೆಕ್ಕಪತ್ರ ತಪಾಸಣೆ ವರದಿಯಲ್ಲಿ ಈ ವ್ಯತ್ಯಾಸ ಸಿಕ್ಕಿಬಿದ್ದಿದೆ. ಆದ್ದರಿಂದ ಮೆಸ್ಕಾಂ ಬಾಕಿ ಹಣದ ವಸೂಲಿಗೆ ಹೊರಟಿದೆ.
ಕೋಡಿ ಭಾಗದ 764 ಮನೆಗಳಿಂದ 16.5ಲಕ್ಷ ರೂ. ವಸೂಲಿ ಮಾಡಲು ಮೆಸ್ಕಾಂ ನೋಟಿಸ್ ನೀಡಿದೆ. ಕಳೆದ 3 ವರ್ಷಗಳಿಂದ ಬಿಲ್ಲಿನಲ್ಲಿ ವ್ಯತ್ಯಾಸ ವಾದ ಹಣವನ್ನು ಪಾವತಿಸುವಂತೆ ಸೂಚಿಸಲಾಗಿದೆ. ಕೆಲವರಿಗೆ 92 ರೂ. ಅಷ್ಟೇ ಬಂದಿದ್ದರೆ ಇನ್ನೂ ಕೆಲವರಿಗೆ 3 ಸಾವಿರ ರೂ., 5 ಸಾವಿರ ರೂ.ವರೆಗೆ ಕಟ್ಟಲು ಬಂದಿದೆ. ಕೋಡಿ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮಾಂತರದ ಮಾದರಿಯಲ್ಲಿ ಆರ್ಥಿಕವಾಗಿ ಸಿರಿತನವಿಲ್ಲದ ಮಂದಿಯೇ ಹೆಚ್ಚು ಇರುವ ಕಡಲತಡಿಯ ಪ್ರದೇಶ. ಆದ್ದರಿಂದ ಈ ವ್ಯತ್ಯಾಸದ ಬಿಲ್ ಪಾವತಿ ಅನೇಕರಿಗೆ ಕಷ್ಟವಾಗಿದೆ.
ಮೆಸ್ಕಾಂ ವತಿಯಿಂದ ಆಗಿರುವ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವುದು ಸರಿಯಲ್ಲ. ಈ ಬಿಲ್ಲನ್ನು ರದ್ದು ಮಾಡಬೇಕು ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಮೆಸ್ಕಾಂ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಹೊರೆ ಹಾಕಬಾರದು. ಏಕಾಏಕಿ ಮೂರು ವರ್ಷದ ಹಣ ಪಾವತಿ ಬಡವರಿಂದ ಅಸಾಧ್ಯ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮೆಸ್ಕಾಂ ಕುಂದಾಪುರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಕೇಶ್, ಗ್ರಾಹಕರು ವೆಚ್ಚ ಮಾಡಿದ ವಿದ್ಯುತ್ ಬಿಲ್ ಕಳುಹಿಸಲಾಗಿದೆ. ಹೊರತು ಉಪಯೋಗಿಸದ ವಿದ್ಯುತ್ಗೆ ಅಲ್ಲ. ಭಾರೀ ಮೊತ್ತವೇನೂ ಇಲ್ಲ. ಮೆಸ್ಕಾಂಗೆ ಪಾವತಿಸಬೇಕಾದ ಹಣ ಆದ ಕಾರಣ ರದ್ದು ಮಾಡುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಗ್ರಾಹಕರು ಇದನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಗ್ರಾಹಕರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು ಎಂದಿದ್ದಾರೆ.