ಅನರ್ಹ ವಿದೇಶಿ ವೈದ್ಯ ಪದವೀಧರರಿಂದ ವೈದ್ಯಕೀಯ ವೃತ್ತಿ: ದೇಶದಾದ್ಯಂತ 91 ಸ್ಥಳಗಳಲ್ಲಿ ಸಿಬಿಐ ದಾಳಿ
![ಅನರ್ಹ ವಿದೇಶಿ ವೈದ್ಯ ಪದವೀಧರರಿಂದ ವೈದ್ಯಕೀಯ ವೃತ್ತಿ: ದೇಶದಾದ್ಯಂತ 91 ಸ್ಥಳಗಳಲ್ಲಿ ಸಿಬಿಐ ದಾಳಿ ಅನರ್ಹ ವಿದೇಶಿ ವೈದ್ಯ ಪದವೀಧರರಿಂದ ವೈದ್ಯಕೀಯ ವೃತ್ತಿ: ದೇಶದಾದ್ಯಂತ 91 ಸ್ಥಳಗಳಲ್ಲಿ ಸಿಬಿಐ ದಾಳಿ](https://www.varthabharati.in/sites/default/files/images/articles/2022/12/29/361784-1672328350.jpeg)
ಹೊಸದಿಲ್ಲಿ, ಡಿ.29: ಭಾರತದಲ್ಲಿ ವೈದ್ಯಕೀಯ ವೃತ್ತಿ ಕೈಗೊಳ್ಳಲು ಅನರ್ಹರಾದ ವಿದೇಶಿ ಪದವೀಧರ ವೈದ್ಯಕೀಯ ವಿದ್ಯಾರ್ಥಿಗಳ ತನಿಖೆ ನಡೆಸುತ್ತಿರುವ ಸಿಬಿಐ(CBI) ಗುರುವಾರ ದೇಶಾದ್ಯಂತ 90 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ವಿದೇಶದಲ್ಲಿ ವೈದ್ಯಕೀಯ ಪದವಿ ಶಿಕ್ಷಣ ಪಡೆದವರು, ಭಾರತದಲ್ಲಿ ವೈದ್ಯಕೀಯ ವೃತ್ತಿಯನ್ನು ಕೈಗೊಳ್ಳಬೇಕಾದರೆ ಅವರು ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕಾಗುತ್ತದೆ. ಆದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವವರ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗಿದೆಯೆಂದು ಸಿಬಿಐ ಮೂಲಗಳು ತಿಳಿಸವೆ.
ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ (FMGE) ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವ 73 ವಿದೇಶಿ ವೈದ್ಯಕೀಯ ಪದವೀಧರರು ಹಾಗೂ ಅವರಿಗೆ ಅನುಮತಿ ನೀಡಿದ್ದ 14 ರಾಜ್ಯ ವೈದ್ಯಕೀಯ ಮಂಡಳಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸುವುದಕ್ಕಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೀಗೆ ನೋಂದಣಿಗೊಳ್ಳಲು ಅವರು ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕಾಗುತ್ತದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಅಭ್ಯರ್ಥಿಗಳು ನಕಲಿ ಅರ್ಹತಾ ಪ್ರಮಾಣಪತ್ರಗಳನ್ನು ಸೃಷ್ಟಿಸಿದ್ದರು. ಆದರೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಕಳುಹಿಸಿಕೊಡುವ ಅರ್ಹತಾ ಪರೀಕ್ಷಾ ಪರೀಕ್ಷೆಯ ಫಲಿತಾಂಶಗಳೊಂದಿಗೆ ಈ ಪ್ರಮಾಣಪತ್ರಗಳನ್ನು ವೈದ್ಯಕೀಯ ಮಂಡಳಿಗಳು ಪರಿಶೀಲಿಸಬಹುದಾಗಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ.
ರಾಜ್ಯ ವೈದ್ಯಕೀಯ ಮಂಡಳಿಗಳ ಅಧಿಕಾರಿಗಳು, ಈ ಹಿಂದೆ ಅಸ್ತಿತ್ವದಲ್ಲಿ ದ್ದ ಭಾರತೀಯ ವೈದ್ಯಕೀಯ ಮಂಡಳಿ ಹಾಗೂ 73 ವಿದೇಶಿ ವೈದ್ಯಕೀಯ ಪದವೀಧರರ ವಿರುದ್ಧ ಸಿಬಿಐ ಭ್ರಷ್ಟಾಚಾರ, ಕ್ರಿಮಿನಲ್ ಸಂಚು, ಫೋರ್ಜರಿ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿದೆ.