ಬೆಳಗಾವಿ ಅಧಿವೇಶನಕ್ಕೆ ತೆರೆ: ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಸಿಗದ ಸಮರ್ಪಕ ಉತ್ತರ; ಕಾಂಗ್ರೆಸ್ ಸಭಾತ್ಯಾಗ-ಜೆಡಿಎಸ್ ಗದ್ದಲ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಗದ್ದಲ ಗಲಾಟೆಯ ನಡುವೆಯೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಆರಂಭವಾದ ಚಳಿಗಾಲದ ವಿಧಾನಮಂಡಲ ಅಧಿವೇಶನವು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತು.
ಉತ್ತರ ಕರ್ನಾಟಕ ಭಾಗದಲ್ಲಿನ ಸಮಸ್ಯೆಗಳ ಕುರಿತು ನಡೆದ ಚರ್ಚೆಗೆ ಸಮರ್ಪಕವಾದ ಉತ್ತರವನ್ನು ಸರಕಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರೆ, ನೂತನ ಪಿಂಚಣಿ ಯೋಜನೆಯನ್ನು ವಿರೋಧಿಸಿ ನೌಕರರು ನಡೆಸುತ್ತಿರುವ ಹೋರಾಟದ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಜೆಡಿಎಸ್ ಸದಸ್ಯರು ಗದ್ದಲ ಎಬ್ಬಿಸಿದರು.
ಸರಕಾರದ ನಡೆಗೆ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ, ಕಬ್ಬು, ರಾಗಿ, ಭತ್ತ, ಅಡಿಕೆ, ತೊಗರಿ ಬೆಳೆಗಳ ಬಗ್ಗೆ ನಾವು ಮಾತನಾಡಿದ್ದೇವೆ. ರೈತರು ತೊಂದರೆಯಲ್ಲಿದ್ದಾರೆ. ಇದ್ಯಾವುದನ್ನೂ ಪರಿಗಣಿಸದೆ, ಸರಕಾರ ಲಿಖಿತ ಉತ್ತರ ನೀಡಿದೆ.ನಾವು ಹೇಳಿದಂತೆ ಪರಿಹಾರದ ಬಗ್ಗೆ ಹೇಳಿಲ್ಲ ಎಂದರು.
ಈ ರೀತಿ ನಡೆದುಕೊಳ್ಳುವ ಸರಕಾರಕ್ಕೆ ನಾವು ವಿರೋಧ ಮಾಡಬೇಕಾಗುತ್ತದೆ, ಧಿಕ್ಕಾರಕೂಗಬೇಕಾಗುತ್ತದೆ.ತೊಗರಿ ಬೆಳೆಯುವವರು, ಕಬ್ಬು ಬೆಳೆಗಾರರು, ಭತ್ತ ಬೆಳೆಯುವವರು ಉತ್ತರ ಕರ್ನಾಟಕದವರು. ಆದರೆ, ಇವರ ಸಮಸ್ಯೆಗಳಿಗೆ ಸರಕಾರ ಉತ್ತರ ನೀಡಿಲ್ಲ. ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ಮೂರು ಬಾರಿ ನೋಟಿಸ್ ಕೊಟಿದ್ದೇವೆ. ಆದರೂ, ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಇವತ್ತೆ ಸಚಿವ ಸಂಪುಟ ಸಭೆ ಇಟ್ಟುಕೊಳ್ಳ ಬೇಕಾ? ಇದನ್ನುಒಂದು ಜವಾಬ್ದಾರಿ ಸರಕಾರ ಎಂದು ಕರೆಯಬೇಕಾ?ಈ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಅವರು ಕಿಡಿಗಾರಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ಸದಸ್ಯ ಡಿ.ಕೆ.ಶಿವಕುಮಾರ್, ವೋಟರ್ ಲಿಸ್ಟ್ ಅಕ್ರಮ, ಚಿಲುಮೆ ಸಂಸ್ಥೆ, 40 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ಮಾಡಿಕೊಡಿ. ಸದನವನ್ನುಇನ್ನೂ ಎರಡು ಗಂಟೆಗಳ ಕಾಲ ನಡೆಸಿ. ಯಾವುದೆ ಸರಕಾರಿ ಕಚೇರಿಗಳಿಗೆ ಹೋದರು ಅಲ್ಲಿನ ಗೋಡೆಗಳು ಕಾಸು, ಕಾಸು ಎಂದು ಕೂಗುತ್ತಿವೆ ಎಂದು ಕಿಡಿಗಾರಿದರು.
ಇದೇ ವೇಳೆ ಸದನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರಿಂದ ಗದ್ದಲದ ವಾತಾವರಣ ನಿರ್ಮಾಣವಾದ್ದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆಕಾಗೇರಿ ಸದವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
‘ಉತ್ತರಕರ್ನಾಟಕ ಭಾಗದ ಅಭಿವೃದ್ಧಿ, ವಿಶೇಷವಾಗಿ ನೀರಾವರಿ, ಅತಿವೃಷ್ಟಿ, ಬೆಳೆ ನಷ್ಟ ಎಲ್ಲದರ ಬಗ್ಗೆ ಸದಸ್ಯರು ಮಾತನಾಡಿದ್ದಾರೆ. ಸರಕಾರ ಈ ಬಗ್ಗೆ ಪರಿಶೀಲನೆ ಮಾಡಿ, ಸದಸ್ಯರು ನೀಡಿರುವಂತಹ ಸಲಹೆಗಳ ಬಗ್ಗೆ ಕೂಲಂಕಷವಾಗಿ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತದೆ’
-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ







