2021-22ರಲ್ಲಿ ಚುನಾವಣಾ ಟ್ರಸ್ಟ್‌ಗಳು ನೀಡಿದ ಒಟ್ಟು ದೇಣಿಗೆಯ 72.17% ಪಾಲು ಬಿಜೆಪಿಗೆ: ಎಡಿಆರ್ ವರದಿ

ಹೊಸದಿಲ್ಲಿ: 2021-'22ರಲ್ಲಿ ಚುನಾವಣಾ ಟ್ರಸ್ಟ್ ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು ದೇಣಿಗೆಯಲ್ಲಿ ಶೇಕಡಾ 72.17 ರಷ್ಟು ಪಾಲನ್ನು ಬಿಜೆಪಿ ಪಡೆದುಕೊಂಡಿದೆ. ಬಿಜೆಪಿ ಒಟ್ಟು 351.50 ಕೋಟಿ ರೂ. ದೇಣಿಗೆ ಪಡೆದಿದ್ದು, ಕಾಂಗ್ರೆಸ್ ಪಕ್ಷವು ಟಿಆರ್‌ಎಸ್, ಸಮಾಜವಾದಿ ಪಕ್ಷ, ಎಎಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್‌ಗಿಂತ ಕಡಿಮೆ ದೇಣಿಗೆಯನ್ನು ಪಡೆದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಗುರುವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಚುನಾವಣಾ ಟ್ರಸ್ಟ್ ಅಥವಾ ಎಲೆಕ್ಟೋರಲ್ ಟ್ರಸ್ಟ್ ಎನ್ನುವುದು ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳನ್ನು ಕ್ರಮಬದ್ಧವಾಗಿ ಸ್ವೀಕರಿಸಲು ಭಾರತದಲ್ಲಿ ರೂಪುಗೊಂಡ ಲಾಭರಹಿತ ಸಂಸ್ಥೆಯಾಗಿದೆ.
ಚುನಾವಣಾ ಟ್ರಸ್ಟ್‌ಗಳಿಂದ 2021-'22ರಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಹತ್ತೊಂಬತ್ತು ಪಟ್ಟು ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಎಡಿಆರ್ ಡೇಟಾ ತೋರಿಸಿದೆ. ಬಿಜೆಪಿ ಪಡೆದ ಒಟ್ಟು ದೇಣಿಗೆಗಳು ಇತರ ಒಂಬತ್ತು ಪಕ್ಷಗಳಿಗಿಂತ 2.5 ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.
2021-22ರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸ್ವೀಕರಿಸಿದ ಒಟ್ಟು ದೇಣಿಗೆಯಲ್ಲಿ 351.50 ಕೋಟಿ ಅಥವಾ 72.17 ಪ್ರತಿಶತ ಬಿಜೆಪಿಗೆ ಹೋಗಿದೆ ಎಂದು ವರದಿ ಹೇಳಿದೆ.
ಚುನಾವಣಾ ಟ್ರಸ್ಟ್‌ಗಳಿಂದ ಕಾಂಗ್ರೆಸ್ 18.44 ಕೋಟಿ ರೂಪಾಯಿ ಪಡೆದರೆ, ಟಿಆರ್‌ಎಸ್ 40 ಕೋಟಿ, ಸಮಾಜವಾದಿ ಪಕ್ಷ 27 ಕೋಟಿ, ಆಮ್ ಆದ್ಮಿ ಪಕ್ಷ 21.12 ಕೋಟಿ ಮತ್ತು ವೈಎಸ್‌ಆರ್ ಕಾಂಗ್ರೆಸ್ 20 ಕೋಟಿ ರೂಪಾಯಿ ಪಡೆದಿವೆ ಎಂದು ಎಡಿಆರ್ ವರದಿ ಹೇಳಿದೆ.
ಚುನಾವಣಾ ಟ್ರಸ್ಟ್‌ಗಳ ಮೂಲಕ ಶಿರೋಮಣಿ ಅಕಾಲಿದಳ (ಎಸ್‌ಎಡಿ) 7 ಕೋಟಿ ರೂ., ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ 1 ಕೋಟಿ ರೂ., ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಡಿಎಂಕೆ ತಲಾ 50 ಲಕ್ಷ ರೂ.ಗಳನ್ನು ಪಡೆದಿವೆ ಎಂದು ವರದಿ ತಿಳಿಸಿದೆ.
ಎಲೆಕ್ಟೋರಲ್ ಟ್ರಸ್ಟ್‌ಗಳು ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಒಟ್ಟು 487.09 ಕೋಟಿ ರೂಪಾಯಿಗಳನ್ನು ಪಡೆದಿದ್ದು, ವಿವಿಧ ರಾಜಕೀಯ ಪಕ್ಷಗಳಿಗೆ 487.06 ಕೋಟಿ ರೂಪಾಯಿಗಳನ್ನು (ಶೇ 99.99) ವಿತರಿಸಿವೆ ಎಂದು ಎಡಿಆರ್ ವರದಿ ತಿಳಿಸಿದೆ.







